ಕೂಡಿಗೆ: ಶಾಲಾ ಶಿಕ್ಷಣ ಇಲಾಖೆ ಹಾಗೂ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ ಅಕ್ಷರ ಫೌಂಡೇಶನ್ ಸ್ವಯಂ ಸೇವಾ ಸಂಸ್ಥೆ ಯ ಸಹಯೋಗದಲ್ಲಿ ಗಣಿತ ಕಲಿಕಾ ಆಂದೋಲನದ ಅಂಗವಾಗಿ ೨೦೨೫-೨೬ ನೇ ಸಾಲಿನಲ್ಲಿ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಅನುಷ್ಠಾನಗೊಳಿಸಲಾಗಿರುವ ಗಣಿತ ಕಲಿಕಾ ಆಂದೋಲನದ ಅಂಗವಾಗಿ ಕೂಡಿಗೆ ಡಯಟ್ ಸಂಸ್ಥೆಯಲ್ಲಿ ಜಿಲ್ಲಾಮಟ್ಟದ ಗಣಿತ ವಿಚಾರ ಸಂಕಿರಣ: ೨೦೨೬ ಹಾಗೂ ಗಣಿತ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ ೨೫ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯಸ್ಥರು ಹಾಗೂ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ( ಸಿ.ಆರ್.ಪಿ.) ಗಳನ್ನು ಸನ್ಮಾನಿಸಲಾಯಿತು.

ಜಿಲ್ಲಾಮಟ್ಟದ ಗಣಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಗಣಿತ ಸ್ಪರ್ಧೆಯ ಸಮೀಕ್ಷಾ ವರದಿ ಬಿಡುಗಡೆಗೊಳಿಸಿ ಮಾತನಾಡಿದ ಡಯಟ್ ಸಂಸ್ಥೆಯ ಪ್ರಾಂಶುಪಾಲ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಅಭಿವೃದ್ಧಿ ) ರಾಮಚಂದ್ರರಾಜೇ ಅರಸ್, ಪ್ರಾಥಮಿಕ ಶಾಲೆಯ ಮಕ್ಕಳಲ್ಲಿ ಗಣಿತ ಕಲಿಕೆಯನ್ನು ಉತ್ತಮಪಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಗಣಿತ ಕಲಿಕಾ ಆಂದೋಲನದ ಮೂಲಕ ೪, ೫ ಮತ್ತು ೬ನೇ ತರಗತಿಗಳ ಮಕ್ಕಳಲ್ಲಿ ಗಣಿತ ಕಲಿಕಾಭ್ಯಾಸವನ್ನು ಉತ್ತಮಪಡಿಸಲು ಸಹಕಾರಿಯಾಗಿದೆ ಎಂದರು. ಗಣಿತ ಕಲಿಕಾ ಆಂದೋಲನದ ಉದ್ದೇಶ ಹಾಗೂ ಮಕ್ಕಳ ಗಣಿತ ಸ್ಪರ್ಧೆಯ ಮಹತ್ವ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಅಕ್ಷರ ಫೌಂಡೇಶನ್ ನ ಹಿರಿಯ ವಿಭಾಗೀಯ ವ್ಯವಸ್ಥಾಪಕಿ ಅಂಜಲೀನಾ ಗ್ರೇಗರಿ, ಗಣಿತ ಕಲಿಕಾ ಆಂದೋಲನವು ಸರ್ಕಾರಿ ಪ್ರಾಥಮಿಕ ಶಾಲೆಗಳ ೪, ೫ ಮತ್ತು ೬ ನೇ ತರಗತಿಗಳ ಮಕ್ಕಳಲ್ಲಿ ನಿರಂತರವಾಗಿ ಗಣಿತ ಕಲಿಕೆಯ ಕೌಶಲ್ಯ ಹಾಗೂ ಜ್ಞಾನ ಬೆಳೆಸಲು ಸಹಕಾರಿಯಾಗಿದೆ. ಗಣಿತದ ಚಟುವಟಿಕೆಗಳ ನಂತರ ಮಕ್ಕಳ ಕಲಿಕಾ ಸಾಮರ್ಥ್ಯ ಹಾಗೂ ಅವರ ಪ್ರತಿಭೆಯನ್ನು ಗುರುತಿಸಲು ಗಣಿತ ಸಾಧನಾ ಸ್ಪರ್ಧೆ ನಡೆಸುವ ಮೂಲಕ ಅವರನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು.

ಆಂದೋಲನದ ಸಂಯೋಜಕರಾದ ಕೂಡಿಗೆ ಡಯಟ್ ಸಂಸ್ಥೆಯ ಉಪನ್ಯಾಸಕ ವಿ.ವಿಜಯ್ ಮಾತನಾಡಿ, ಗಣಿತ ಕಲಿಕಾ ಆಂದೋಲನದ ಚಟುವಟಿಕೆಗಳ ಕುರಿತು ವಿವರಿಸಿದರು. ಗಣಿತ ಕಲಿಕಾ ಆಂದೋಲನದ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿದ ೨೫ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಪರವಾಗಿ ಸಂಬAಧಿಸಿದ ಶಾಲಾ ಮುಖ್ಯಸ್ಥರು ಹಾಗೂ ಇದಕ್ಕೆ ಪೂರಕವಾಗಿ ಸಹಕರಿಸಿದ ೨೫ ಮಂದಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ( ಸಿ.ಆರ್.ಪಿ.ಗಳು) ಗಳಿಗೆ ಡಯಟ್ ಸಂಸ್ಥೆಯ ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್, ಪ್ರಶಂಸನಾ ಪತ್ರ ವಿತರಿಸಿ ಸನ್ಮಾನಿಸಿದರು.

ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಎನ್.ವಿ.ಸ್ವಾಮಿ, ಬಿ.ಎನ್. ಪುಷ್ಪ, ಅಕ್ಷರ ಫೌಂಡೇಶನ್‌ನ ಹಿರಿಯ ಜಿಲ್ಲಾ ಕ್ಷೇತ್ರ ಸಂಯೋಜಕ ಕುಮಾರಸ್ವಾಮಿ, ಜಿಲ್ಲೆಯ ವಿವಿಧ ಸಿಆರ್‌ಪಿಗಳು, ವಿವಿಧ ಸರ್ಕಾರಿ ಪ್ರಾಥಮಿಕ ಶಾಲೆಗಳ ಮುಖ್ಯಸ್ಥರು, ಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು. ಕೂಡಿಗೆ ಕ್ಲಸ್ಟರ್‌ನ ಸಿಆರ್‌ಪಿ. ಕೆ.ಶಾಂತಕುಮಾರ್ ಸ್ವಾಗತಿಸಿ, ವಂದಿಸಿದರು.