ವೀರಾಜಪೇಟೆ, ಮಾ.೧೦: ಕೊಡಗು ಜಿಲ್ಲೆಯಲ್ಲಿ ಪ್ರಥಮವಾಗಿ ಸ್ಥಾಪನೆಯಾಗಿದ್ದ ವೀರಾಜಪೇಟೆ ತಾಲೂಕಿನ ಕದನೂರು ಗ್ರಾಮದಲ್ಲಿ ನೆಲೆಕಂಡಿರುವ ಸುಮಾರು ೪೦೦ ವರ್ಷಗಳ ಇತಿಹಾಸವಿರುವ ಮಠಪುರ ಆದಿ ಮುತ್ತಪ್ಪ ದೇವಾಲಯದ ವಾರ್ಷಿಕ ತೆರೆ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.
ದೇಗುಲದಲ್ಲಿ ಮುಂಜಾನೆ ಗಣಪತಿ ಹೋಮದೊಂದಿಗೆ ಆರಂಭವಾದ ವಾರ್ಷಿಕ ಮಹೋತ್ಸವವು ಧ್ವಜಾರೋಹಣ, ಪೈಂಗುತ್ತಿ, ಸಂಜೆ ವೇಳೆ ೭ ಗಂಟೆಗೆ ಮುತ್ತಪ್ಪನ್ ವೆಳ್ಳಾಟಂ ಮತ್ತು ಗುಳಿಗ ವೆಳ್ಳಾಟಂ ನಡೆಯಿತು. ನೆರೆದ ಭಕ್ತಾದಿಗಳಿಗೆ ದೇವಾಲಯದ ಆಡಳಿತ ಮಂಡಳಿಯ ವತಿಯಿಂದ ಅನ್ನಸಂತರ್ಪಣೆ ನಡೆಯಿತು.
ವಾರ್ಷಿಕ ತೆರೆ ಮಹೋತ್ಸವದಲ್ಲಿ ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಉತ್ಸವ ಸಮಿತಿಯ ಸದಸ್ಯರು, ಕದನೂರು ಗ್ರಾಮದ ಗ್ರಾಮಸ್ಥರು ಸೇರಿದಂತೆ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.