ವೀರಾಜಪೇಟೆ, ಮಾ. ೧೦: ಲೈನ್‌ಮನೆಯಲ್ಲಿ ವಾಸವಿದ್ದ ಕಾರ್ಮಿಕ ದಂಪತಿಗಳ ಮಧ್ಯೆ ಜಗಳ ನಡೆಯುತ್ತಿದ್ದ ಜಗಳ ಬಿಡಿಸಲು ಹೋದವನನ್ನು ಕೊಲೆ ಮಾಡಿದ ಆರೋಪಿಗೆ ವೀರಾಜಪೇಟೆ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ದಂಡ ಸಹಿತ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ವೀರಾಜಪೇಟೆ ತಾಲೂಕಿನ ಕೊಳ್ತೋಡು ಬೈಗೋಡು ಗ್ರಾಮದ ನಿವಾಸಿ ಪುಲಿಯಂಡ ರಾಜೇಶ್ ಅವರ ಲೈನ್ ಮನೆಯಲ್ಲಿ ವಾಸವಿದ್ದ ದಿ. ನಾಗೇಶ್ ಎಂಬವರ ಪುತ್ರ ಬಸಪ್ಪ (ರವಿ-೨೫) ಎಂಬಾತನೇ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ.

ಕೊಳ್ತೋಡು ಬೈಗೋಡು ಗ್ರಾಮದ ನಿವಾಸಿ ರಾಜೇಶ್ ಎಂಬವರ ಲೈನ್‌ಮನೆಯಲ್ಲಿ ಕಾರ್ಮಿಕ ದಂಪತಿ ಜೇನು ಕುರುಬರ ಬಸಪ್ಪ ಮತ್ತು ಪತ್ನಿ ರಾಜಮ್ಮ ವಾಸವಾಗಿದ್ದರು. ಮತ್ತೊಂದು ಭಾಗದಲ್ಲಿ ಹುಣಸೂರು ತಾಲೂಕಿನ ಹನಗೋಡು ನಿವಾಸಿ ಶಿವು ಜಲೇಂದ್ರ ಮತ್ತು ಪತ್ನಿ ಜಾನಕಿ ವಾಸವಾಗಿದ್ದರು. ಬಸಪ್ಪ ಮತ್ತು ಪತ್ನಿ ರಾಜಮ್ಮ ಮಧ್ಯೆ ಕಲಹಗಳು ನಡೆಯುತ್ತಿದ್ದವು. ಪತಿ, ಪತ್ನಿಯರ ಕಲಹದಿಂದ ಬೇಸತ್ತ ಶಿವು ಜಲೇಂದ್ರ ಬಸಪ್ಪನ ಬಳಿ ಜಗಳ ಮಾಡದಂತೆ ವಿನಂತಿ ಮಾಡಿದ್ದ. ಇದರಿಂದ ಕುಪಿತಗೊಂಡ ಬಸಪ್ಪ ನನ್ನ ತಂಟೆಗೆ ಬರಬೇಡ ಎಂದು ಬೆದರಿಸಿದ್ದ. ೧೪-೦೬-೨೦೨೧ ರಂದು ಕಾರ್ಮಿಕರಿಗೆ ಮಾಲೀಕರು ರಜೆ ನೀಡಿದ್ದರು. ಅಂದು ಮಧ್ಯಾಹ್ನ ಸುಮಾರು ೧.೩೦ ರ ಸಮಯದಲ್ಲಿ ಎಂದಿನAತೆ ಬಸಪ್ಪ ಮತ್ತು ಪತ್ನಿ ರಾಜಮ್ಮ ಮಧ್ಯೆ ಜಗಳ ಆರಂಭವಾಗಿದೆ. ಜಗಳ ತಾರಕಕ್ಕೇರಿದೆ. ಇದನ್ನು ಗಮನಿಸಿದ ಶಿವು ಜಗಳ ಬಿಡಿಸಲು ಮುಂದಾಗಿದ್ದಾನೆ. ಕುಪಿತನಾದ ಬಸಪ್ಪ ಮನೆಯಲ್ಲಿದ್ದ ಕತ್ತಿಯನ್ನು ತೆಗೆದುಕೊಂಡು ಶಿವುನ ಕುತ್ತಿಗೆಯ ಎಡಭಾಗಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಸ್ಥಳೀಯರು ಗಾಯಾಳುವನ್ನು ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹೊರ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ದಿನಾಂಕ ೨೪-೦೬-೨೦೨೧ ರಂದು ಚಿಕಿತ್ಸೆ ಫಲಕಾರಿಯಾಗದೆ ಶಿವು ಜಲೇಂದ್ರ ಸಾವನ್ನಪ್ಪಿದ್ದಾರೆ.

ಗಾಯಾಳು ಶಿವು ಜಲೇಂದ್ರ ನೀಡಿದ್ದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡ ವೀರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್. ಶ್ರೀಧರ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ವೀರಾಜಪೇಟೆ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಸ್. ನಟರಾಜು ವಿಚಾರಣೆ ನಡೆಸಿ ತಾ. ೯ ರಂದು ತೀರ್ಪು ಪ್ರಕಟಿಸಿದ್ದು, ೧೦ ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ. ೧೦,೦೦೦ ದಂಡ ವಿಧಿಸಿದ್ದಾರೆ. ಒಂದು ವೇಳೆ ದಂಡ ಪಾವತಿಸಲು ವಿಫಲವಾದಲ್ಲಿ ೬ ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ವಕೀಲ ಯಾಸೀನ್ ಅಹಮದ್ ಅವರು ಸರ್ಕಾರದ ಪರ ವಾದ ಮಂಡಿಸಿದರು.

- ಕಿಶೋರ್ ಕುಮಾರ್ ಶೆಟ್ಟಿ