ಶನಿವಾರಸAತೆ, ಮಾ. ೧೦: ಸರ್ಕಾರದ ಸವಲತ್ತುಗಳನ್ನು ಕಟ್ಟಡ ನಿರ್ಮಾಣ ಕಾರ್ಮಿಕರು ಹಾಗೂ ಇತರೆ ಕೂಲಿ ಕಾರ್ಮಿಕರು ಪಡೆದುಕೊಳ್ಳುವ ಬಗ್ಗೆ ಅರಿವು ಮೂಡಿಸುವುದೇ ಕಾನೂನು ಅರಿವು ಕಾರ್ಯಕ್ರಮದ ಉದ್ದೇಶ ಎಂದು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಹೊಸೂರು ರಸ್ತೆಯಲ್ಲಿರುವ ಕೊಡಗು ಜಿಲ್ಲಾ ಕಟ್ಟಡ ನಿರ್ಮಾಣ ಕಾರ್ಮಿಕ ಹಾಗೂ ಇತರೆ ಕೂಲಿ ಕಾರ್ಮಿಕರ ಸಂಘ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸಹಯೋಗದಲ್ಲಿ ಸಂಘದ ಸಭಾಂಗಣದಲ್ಲಿ ನಡೆದ ಕಾನೂನು ಅರಿವು ಹಾಗೂ ಕಾರ್ಮಿಕ ಇಲಾಖೆಯ ಸವಲತ್ತುಗಳ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ವಾಸದ ಮನೆಗಳಿಗೆ ಸುಂದರ ರೂಪ ಕೊಡುವ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರಿಗೆ ಸರ್ಕಾರದ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸತ್ಪçಜೆಗಳಾಗಿ ಬಾಳಬೇಕು ಎಂದು ಕರೆ ನೀಡಿದರು.

ಜಿಲ್ಲಾ ಕಾರ್ಮಿಕ ಇಲಾಖೆ ಸಿಬ್ಬಂದಿ ವಾಣಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಅಸಂಘಟಿತ ಕಾರ್ಮಿಕರು ಹಾಗೂ ೧೦೧ ವರ್ಗದ ಕಾರ್ಮಿಕರಿಗೂ ರಾಜ್ಯ ಸರ್ಕಾರದ ನೋಂದಣಿ ನಂತರ ಕಾರ್ಮಿಕ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಹಾಗೂ ಕ್ಷೇಮಾಭಿವೃದ್ಧಿ ನಿಧಿಯ ಬಗೆ ಮಾಹಿತಿ ನೀಡಿದರು.

ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಬಿ.ಎಂ. ಯತೀಶ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪ್ರಧಾನ ಕಾನೂನು ನೆರವು ಅಭಿರಕ್ಷಕ ಎಂ.ವೈ. ಮೈಮುನ, ಸಹಾಯಕ ಕಾನೂನು ನೆರವು ಅಭಿರಕ್ಷಕ ಕೆ.ಪಿ.ಪ್ರತಾಪ್ ಹಾಗೂ ಮಂಜುಳಾ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಂ.ಜೆ.ವಿಠಲ್ ನಾಗರಾಜ್ ಮಾತನಾಡಿ, ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರ ಸಂಘ ವ್ಯವಸ್ಥಿತವಾಗಿ ನಡೆಯುತ್ತಿದೆ. ಕಾರ್ಮಿಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಸಹಾಯಧನ ನೀಡಬೇಕು. ಪಿಂಚಣಿಯನ್ನು ರೂ. ೩ ಸಾವಿರಕ್ಕೆ ಏರಿಸಿರುವುದು ಸ್ವಾಗತಾರ್ಹ. ಕಾರ್ಮಿಕ ಇಲಾಖೆಯ ಯೋಜನೆಗಳು ಅನುಷ್ಠಾನಕ್ಕೆ ಬರಬೇಕು ಎಂದರು.

ರಾಜ್ಯ ಕಟ್ಟಡ ಕಾರ್ಮಿಕರ ಸಂಘದ ನಿರ್ದೇಶಕ ನಾಗೇಶ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ತಾಲೂಕು ಅಧ್ಯಕ್ಷ ಎಸ್.ಎಸ್.ಶಿವಾನಂದ್, ಸಮಾಜ ಸೇವಕ ಕಾಜೂರು ಚನ್ನಬಸಪ್ಪ ಹಾಗೂ ಕಾರ್ಮಿಕ ಇಲಾಖೆ ಸಿಬ್ಬಂದಿ ಪವಿತ್ರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಾಲಾಜಿ ಮೆಲೋಡಿಸ್ ಗೀತಗಾಯಕರ ತಂಡದ ಕಲಾವಿದರು ಸಂಗೀತ ಕಾರ್ಯಕ್ರಮ ನೀಡಿ ರಂಜಿಸಿದರು. ಸಾಹಿತಿ ಶ.ಗ. ನಯನತಾರಾ, ಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷ ಎಸ್.ಜೆ. ರತ್ನಾಕರ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.

ಶಿಕ್ಷಕ ವಿ.ಆರ್. ನಾಗರಾಜ್, ಸಂಘದ ಉಪಾಧ್ಯಕ್ಷ ಎಸ್.ಸಿ. ರವಿ, ಕಾರ್ಯದರ್ಶಿ ಬಿ.ಎಂ. ಲೋಕೇಶ್, ಸಹಕಾರ್ಯದರ್ಶಿ ಎಸ್.ಎಸ್. ಲೋಕೇಶ್, ನಿರ್ದೇಶಕರಾದ ಎಂ. ಕೃಷ್ಣ, ಹೂವಣ್ಣ, ನಾಗರಾಜ್ ಹಾಗೂ ಸದಸ್ಯರು ಹಾಜರಿದ್ದರು.