ಮಡಿಕೇರಿ, ಮಾ. ೧೦: ಪ್ರಸ್ತುತ ಕೊಲ್ಲಿ ಕದನದ ಪರಿಸ್ಥಿತಿಯ ಬಿಸಿ ಹಲವು ರೀತಿಯಲ್ಲಿ ತಟ್ಟುತ್ತಿದ್ದು, ಕೊಡಗು ಜಿಲ್ಲೆಯಲ್ಲೂ ಎಲ್.ಪಿ.ಜಿ. ಆತಂಕ ಎದುರಾಗುವ ಸನ್ನಿವೇಶ ಕಂಡುಬರುತ್ತಿದೆ.
ಸದ್ಯದ ಮಟ್ಟಿಗೆ ಜಿಲ್ಲೆಯಲ್ಲಿ ಸಮಸ್ಯೆ ಉದ್ಭವಿಸಿಲ್ಲವಾದರೂ ದರ ಏರಿಕೆಯ ಬಿಸಿ ತಟ್ಟುತ್ತಿದೆ. ಮುಂದೆ ಇದೇ ಪರಿಸ್ಥಿತಿ ಎದುರಾದಲ್ಲಿ ಸಂಕಷ್ಟ ಉಂಟಾಗಬಹುದು ಎಂದು ಜಿಲ್ಲಾ ಹೊಟೇಲ್ ಮತ್ತು ರೆಸಾರ್ಟ್ ಉದ್ಯಮಿಗಳ ಸಂಘದ ಅಧ್ಯಕ್ಷ ದಿನೇಶ್ ಕಾರ್ಯಪ್ಪ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ನ ಕೊರತೆ ಎದುರಾಗಿದೆ. ಈ ಬಗ್ಗೆ ಚರ್ಚಿಸಲು ಹೊಟೇಲ್ ಉದ್ಯಮಿಗಳ ಸಂಘದ ಸಭೆಯನ್ನು ಕರೆಯಲಾಗಿದ್ದು, ಈ ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದು ಅವರು ತಿಳಿಸಿದ್ದಾರೆ. ಕೊಡಗಿಗೂ ವಾಣಿಜ್ಯ ಬಳಕೆಯ ಸಿಲಿಂಡರ್ನ ಸಮಸ್ಯೆ ಎದುರಾಗುತ್ತಿದೆ. ದಿಢೀರನೆ, ವಿದ್ಯುತ್ ಮೂಲಕವಾಗಲಿ ಅಥವಾ ಸೌದೆಗಳನ್ನು ಬಳಸಿ ನಿರ್ವಹಣೆ ಮಾಡುವುದು ಉದ್ಯಮಿಗಳಿಗೆ ಸಾಧ್ಯವಾಗದ ವಿಚಾರ ಎಂದು ದಿನೇಶ್ ಕಾರ್ಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಮತ್ತಷ್ಟು ಹದಗೆಟ್ಟರೆ ಇದರ ಬಿಸಿ ತಟ್ಟುವ ಸಾಧ್ಯತೆ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.
ದೇವಿಗ್ಯಾಸ್ ವಿತರಕರಾದ ಮಡಿಕೇರಿಯ ಕೆ.ಎಸ್. ರಮೇಶ್ ಅವರು ಗೃಹ ಬಳಕೆಯ ಸಿಲಿಂಡರ್ ಪೂರೈಕೆಗೆ ಸದ್ಯಕ್ಕೆ ತೊಂದರೆ ಇಲ್ಲ. ಆದರೆ ಕೆಲ ದಿನಗಳಿಂದ ವಾಣಿಜ್ಯ ಬಳಕೆಯ ಸಿಲಿಂಡರ್ನ ಸಮಸ್ಯೆ ಕಂಡುಬರುತ್ತಿರುವುದಾಗಿ ತಿಳಿಸಿದ್ದಾರೆ.
ಎಲ್.ಪಿ.ಜಿ. ಮಾತ್ರವಲ್ಲದೆ ಇಂಧನ ಪೂರೈಕೆಯಲ್ಲೂ ಯುದ್ಧದ ಪರಿಣಾಮದಿಂದಾಗಿ ವ್ಯತ್ಯಯವಾಗುವ ಭೀತಿ ಇದೆ. ಆದರೆ ಸದ್ಯದ ಮಟ್ಟಿಗೆ ಪೆಟ್ರೋಲ್, ಡೀಸೆಲ್ ವಿತರಣೆಯಲ್ಲಿ ಸಮಸ್ಯೆ ಉಂಟಾಗಿಲ್ಲ. ದೇಶದಲ್ಲಿ ಬಂಕ್ಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಬಹುತೇಕ ಎಲ್ಲೆಡೆ ದಾಸ್ತಾನು ಇದೆ ಎಂದು ಉದ್ಯಮಿ ಕೊಲ್ಲಿರ ಉಮೇಶ್ ತಿಳಿಸಿದ್ದಾರೆ. ಆದರೆ ಕಂಪೆನಿಗಳ ಮೂಲಕ ಡೀರ್ಸ್ಗೆ ನೀಡುತ್ತಿದ್ದ ಸಾಲ ಸೌಲಭ್ಯ, ಡಿಸ್ಕೌಂಟ್ನAತಹ ವ್ಯವಸ್ಥೆಗಳನ್ನು ನಿಲ್ಲಿಸಲು ಸೂಚನೆಯಾಗಿದೆ. ಜೊತೆಗೆ ಸಾಧ್ಯವಾದಷ್ಟು ದಾಸ್ತಾನು ಇಟ್ಟುಕೊಳ್ಳುವಂತೆ ಸಲಹೆ ಇರುವುದಾಗಿ ಅವರು ತಿಳಿಸಿದ್ದಾರೆ.
ಎಲ್.ಪಿ.ಜಿ. ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೇಂದ್ರ ವಾಣಿಜ್ಯ ಸಚಿವಾಲಯವು ಈ ಕುರಿತು ಸೂಚನೆ ನೀಡಿದ್ದು, ಅಡುಗೆ ಅನಿಲ ಬಳಕೆಗೆ ಹಾಗೂ ಅನಿಲ ಬಳಕೆಯ ವಾಹನಗಳಿಗೆ ಎಂದಿನAತೆ ಸರಬರಾಜಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.
ಆದರೆ, ವಾಣಿಜ್ಯ ಬಳಕೆಗೆ ಶೇ. ೮೦ ರಷ್ಟು ಮತ್ತಿತರ ಬಳಕೆಗಳಿಗೂ ಶೇ. ೭೦ ರಷ್ಟು ಮಾತ್ರ ಸರಬರಾಜು ಮುಂದುವರಿಯುವುದಾಗಿ ಖಚಿತಪಡಿಸಿದೆ.