ಮಡಿಕೇರಿ, ಮಾ. ೧೦: ಕೊಡಗು ಜಿಲ್ಲೆಯಲ್ಲಿ ೨೦೨೫-೨೬ನೇ ಸಾಲಿನಲ್ಲಿ ಕಾಳುಮೆಣಸು ಉತ್ಪಾದನೆಯು ಶೇ.೧೬ ರಷ್ಟು ಹೆಚ್ಚಾಗಬಹುದೆಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಾಜ್ಯ ಸಚಿವರಾದ ಜಿತಿನ್ ಪ್ರಸಾದ್ ಹೇಳಿದ್ದಾರೆ.

ಲೋಕಸಭೆಯಲ್ಲಿ ಸಂಸದ ಯದುವೀರ್ ಒಡೆಯರ್ ಅವರು ಕೊಡಗಿನಲ್ಲಿ ಕಾಳುಮೆಣಸು ಉತ್ಪಾದನೆಯ ಸ್ಥಿತಿ, ರಫ್ತಿನ ಪರಿಣಾಮ, ರೈತರಿಗೆ ಬೆಂಬಲ ಮತ್ತು ಕನಿಷ್ಟ ಆಮದು ಬೆಲೆಯ ಪರಿಷ್ಕರಣೆಯ ಬಗ್ಗೆ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಾಜ್ಯ ಸಚಿವ ಜಿತಿನ್ ಪ್ರಸಾದ್ ಅವರು, ಕಳೆದ ವರ್ಷಕ್ಕೆ ಹೋಲಿಸಿದರೆ ೨೦೨೫-೨೬ರಲ್ಲಿ ಕೊಡಗಿನಲ್ಲಿ ಕಾಳುಮೆಣಸು ಉತ್ಪಾದನೆಯು ಸುಮಾರು ಶೇ. ೧೬ ರಷ್ಟು ಹೆಚ್ಚಾಗಬಹುದು ಎಂದು ಮಾಹಿತಿ ನೀಡಿದ್ದಾರೆ.

ಭಾರತದ ಕಾಳುಮೆಣಸು ರಫ್ತು ಶೇ. ೧೪.೭೨ ರಷ್ಟು ಹೆಚ್ಚಾಗಿ ೧೦೧.೪೫ ಮಿಲಿಯನ್ ಡಾಲರ್ ತಲುಪಿದೆ ಮತ್ತು ಎಸ್‌ಪಿಐಸಿಇಡಿ ಯೋಜನೆಯು ಕಾಳುಮೆಣಸು ಬೆಳೆಗಾರರಿಗೆ ಉಪಕರಣಗಳು, ತರಬೇತಿ ಮತ್ತು ಮಾರುಕಟ್ಟೆ ಸಂಪರ್ಕಗಳೊAದಿಗೆ ಬೆಂಬಲ ನೀಡುತ್ತಿದೆ. ದೇಶೀಯ ರೈತರನ್ನು ರಕ್ಷಿಸಲು ಕಾಳುಮೆಣಸು ಆಮದಿಗೆ ಪ್ರತಿ ಕೆಜಿಗೆ ರೂ. ೫೦೦ ಕನಿಷ್ಟ ಆಮದು ಬೆಲೆ ಜಾರಿಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.