ಮಡಿಕೇರಿ, ಮಾ. ೧೦: ಕೆÆಡಗು ಜಿಲ್ಲೆಯ ಬೆಟ್ಟತ್ತೂರು ಗ್ರಾಮದಲ್ಲಿ ೧೬ ವರ್ಷದ ಶಾಲಾ ವಿದ್ಯಾರ್ಥಿನಿ ಪೂಜ್ಯ ಹಾಗೂ ವಾಲ್ನೂರು ಗ್ರಾಮದ ಬಾಳೆಗುಂಡಿ ಹಾಡಿಯಲ್ಲಿ ಬುಡಕಟ್ಟು ಮಹಿಳೆ ಜಲಜಾಕ್ಷಿ ಅವರುಗಳು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿರುವ ಘಟನೆಯ ಬಗ್ಗೆ ಇಂದು ಮೇಲ್ಮನೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಅವರು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ ಸೂಕ್ತ ಕ್ರಮಕ್ಕೆ ಸರಕಾರವನ್ನು ಒತ್ತಾಯಿಸಿದರು. ಕೆಲವೇ ದಿನಗಳ ಅಂತರದಲ್ಲಿ ಇಬ್ಬರು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಮಾನವ - ವನ್ಯಜೀವಿ ಸಂಘರ್ಷ ದಿನೇ ದಿನೇ ಹೆಚ್ಚುತ್ತಿದ್ದು, ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಕ್ರಮ ಕೈಗೊಳ್ಳಬೇಕೆಂದು ಸುಜಾ ಆಗ್ರಹಿಸಿದರು.

ಈ ಸಂದರ್ಭ ಮಾತನಾಡಿದ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು, ಘಟನೆಯ ಬಗ್ಗೆ ವಿವರಿಸಿದರಲ್ಲದೆ ಇಲಾಖೆ ಈ ವ್ಯಾಪ್ತಿಯಲ್ಲಿ ಆನೆ ಕಾರ್ಯಪಡೆಯ ಕ್ಯಾಂಪ್‌ನ ಮೂಲಕ ನಿಗಾವಹಿಸಿದೆ. ಇಲಾಖೆಗೆ ಈ ಬಗ್ಗೆ ಸೂಚನೆ ನೀಡಲಾಗಿದ್ದು, ಇಲಾಖಾ ಅಧಿಕಾರಿಗಳು ಕ್ರಮ ವಹಿಸಿದ್ದಾರೆ. ಪ್ರಾಣಿಗಳ ಸಂಖ್ಯೆ ಹೆಚ್ಚಳ ಸೇರಿದಂತೆ ಹಲವಾರು ಕಾರಣಗಳಿಂದ ಮಾನವ - ವನ್ಯಜೀವಿ ಸಂಘರ್ಷ ಕಂಡುಬರುತ್ತಿದ್ದು, ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಆನೆ-ಮಾನವ ಸಂಘರ್ಷ ನಿಯಂತ್ರಿಸಲು ೨೦೨೫-೨೬ನೇ ಸಾಲಿನಲ್ಲಿ ಮಡಿಕೇರಿ ವಿಭಾಗಕ್ಕೆ ೭ ಕಿ.ಮೀ. ಮತ್ತು ನಾಗರಹೊಳೆ ವಿಭಾಗಕ್ಕೆ ೨೦ ಕಿ.ಮೀ. ರೈಲು ಹಳಿ ತಡೆಗೋಡೆ ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.

ಫೆ. ೨೮ ರಂದು ಕಾಡಿನಂಚಿನ ನಿವಾಸಿ ೧೭ ವರ್ಷದ ಬಾಲಕಿ ಆನೆ ದಾಳಿಯಿಂದ ಮೃತಪಟ್ಟಿದ್ದರೆ, ಮಾ. ೯ ರಂದು ಕಾಡಿನೊಳಗೆ ವಾಸಿಸುತ್ತಿದ್ದ ೫೫ ವರ್ಷದ ಬುಡಕಟ್ಟು ಮಹಿಳೆ ಸಾವಿಗೀಡಾಗಿದ್ದಾರೆ, ಇದು ಅತ್ಯಂತ ನೋವಿನ ಸಂಗತಿ ಎಂದರು. ಜೀವ ಅತ್ಯಂತ ಅಮೂಲ್ಯವಾದದ್ದು, ಇದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅರಣ್ಯ ಇಲಾಖೆ ಮಾನವ-ವನ್ಯಜೀವಿ ಸಂಘರ್ಷ ತಡೆಯಲು ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆನೆ ನಿಗ್ರಹ ಕಂದಕ, ಸೌರ ವಿದ್ಯುತ್ ಬೇಲಿ ನಿರ್ವಹಣೆ ಮಾಡಲಾಗುತ್ತಿದೆ. ೨ ಆನೆ ಕಾರ್ಯಪಡೆ ಕಾರ್ಯನಿರ್ವಹಿಸುತ್ತಿದೆ. ಈಗ ೨ ಪುಂಡಾನೆಗಳ ಸೆರೆಗೆ ಮುಖ್ಯ ವನ್ಯಜೀವಿ ಪರಿಪಾಲಕರು ಆದೇಶ ನೀಡಿದ್ದಾರೆ ಎಂದು ತಿಳಿಸಿದರು. ಈ ಎರಡೂ ಪ್ರಕರಣದಲ್ಲಿ ಈಗಾಗಲೇ ರೂ. ೫ ಲಕ್ಷ ಪರಿಹಾರವನ್ನು ಮೃತರ ಹತ್ತಿರದ ಬಂಧುಗಳಿಗೆ ವಿತರಿಸಲಾಗಿದ್ದು, ವಾರದೊಳಗೆ ಉಳಿಕೆ ತಲಾ ರೂ. ೧೫ ಲಕ್ಷ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು. ಆನೆ-ಮಾನವ ಸಂಘರ್ಷ ನಿಯಂತ್ರಿಸಲು ಶಾಶ್ವತ ಪರಿಹಾರ ಕ್ರಮಗಳ ಬಗ್ಗೆಯೂ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.