ಸೋಮವಾರಪೇಟೆ, ಮಾ. ೯: ಇಲ್ಲಿನ ಶ್ರೀ ಮುತ್ತಪ್ಪ ಸ್ವಾಮಿ ಮತ್ತು ಅಯ್ಯಪ್ಪ ಸ್ವಾಮಿ ದೇವಸ್ಥಾನದ ೨೦೨೬ನೇ ಸಾಲಿನ ಜಾತ್ರೋತ್ಸವ ತಾ. ೨೨ ರಿಂದ ೨೪ ರವರೆಗೆ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ. ವಿನೋದ್ ಕುಮಾರ್ ತಿಳಿಸಿದ್ದಾರೆ.
ತಾ. ೨೨ ರಂದು ಬೆಳಿಗ್ಗೆ ೫.೩೦ ರಿಂದ ಪೂಜಾ ಕೈಂಕರ್ಯಗಳು ಆರಂಭಗೊಳ್ಳಲಿದ್ದು, ಗಣಪತಿ ಹೋಮ, ಶುದ್ದೀಪುಣ್ಯ ಮತ್ತು ಧ್ವಜಾರೋಹಣ ನಡೆಯಲಿದೆ. ಮಧ್ಯಾಹ್ನ ೧೨.೩೦ಕ್ಕೆ ಉತ್ಸವ ಪ್ರಾರಂಭ, ನಂತರ ಪ್ರಧಾನ ಅರ್ಚಕರಿಂದ ಕಲಶ ಪೂಜೆ, ೩.೩೦ಕ್ಕೆ ಮುತ್ತಪ್ಪನ್ ದೇವರ ವೆಳ್ಳಾಟಂ ನಡೆಯಲಿದೆ.
ಸಂಜೆ ೪.೩೦ಕ್ಕೆ ಕೇರಳದ ಸಿಂಗಾರಿ ಮೇಳದೊಂದಿಗೆ ಕಲಶ ಮೆರವಣಿಗೆ ನಡೆಯಲಿದ್ದು, ಸಂಜೆ ೬.೩೦ಕ್ಕೆ ಕೊಳಪುರಂ ಮನಹಿಲ್ಲಂ ತಂತ್ರಿ ಶ್ರೀ ಕೃಷ್ಣಕುಮಾರ್ ಜಾತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ. ಸಂಜೆ ೬.೩೦ ರಿಂದ ವಿಷ್ಣುಮೂರ್ತಿ ದೇವರ ವೆಳ್ಳಾಟಂ, ಕರಿಂಗುಟ್ಟಿ ಚಾತನ್, ಕಂಡಕರ್ಣ, ಭಗವತಿ ದೇವಿ, ರಕ್ತ ಚಾಮುಂಡಿ, ಪೊಟ್ಟನ್ ದೇವರ ವೆಳ್ಳಾಟಂ ನಡೆಯಲಿದೆ. ರಾತ್ರಿ ೧೧ಕ್ಕೆ ದೇವರ ಕಳಿಕ್ಕಾಪಾಟ್ ನಡೆಯಲಿದೆ.
ತಾ. ೨೩ ರಂದು ಮಧ್ಯಾಹ್ನ ೧೨.೩೦ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಅಪ್ಪಚ್ಚು ರಂಜನ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ಉದ್ಯಮಿ ಬಿ.ಎಸ್. ಸುಂದರ್ ಪಾಲ್ಗೊಳ್ಳಲಿದ್ದಾರೆ. ರಾತ್ರಿ ಭಕ್ತಾದಿಗಳಿಗೆ ಅನ್ನದಾನ ನಡೆಯಲಿದೆ.
ತಾ. ೨೪ ರಂದು ಬೆಳಗ್ಗಿನ ಜಾವ ೧ ಗಂಟೆಯಿAದ ಮುತ್ತಪ್ಪನ್ ಮತ್ತು ತಿರುವಪ್ಪನ್ ದೇವರ ಕೋಲಗಳು, ಗುರುಶ್ರೀದರ್ಪಣ, ಗುಳಿಗ ದೇವರ ಕೋಲ ನಡೆಯಲಿದೆ. ಅಪರಾಹ್ನ ೩ ಗಂಟೆಗೆ ಸಮಾರೋಪ ನೆರವೇರಲಿದೆ ಎಂದು ವಿನೋದ್‌ಕುಮಾರ್ ಮಾಹಿತಿ ನೀಡಿದ್ದಾರೆ.
ಏ. ೮ ರಂದು ಸಂಜೆ ೬ ಗಂಟೆಯಿAದ ಏ. ೯ ರ ಮಧ್ಯಾಹ್ನ ೧೨.೩೦ ರವರೆಗೆ ದೇವಸ್ಥಾನದ ತಂತ್ರಿಗಳಾದ ಕಾಳೇಘಾಟ್ ಶ್ರೀ ನಾರಾಯಣನ್ ನಂಬೂದರಿ ನೇತೃತ್ವದಲ್ಲಿ ಪ್ರತಿಷ್ಠಾಪನಾ ವಾರ್ಷಿಕೋತ್ಸವ ನಡೆಯಲಿದೆ ಎಂದು ಕಾರ್ಯದರ್ಶಿ ಎನ್.ಟಿ. ಪ್ರಸನ್ನ ನಾಯರ್ ತಿಳಿಸಿದ್ದಾರೆ.