ಕುಶಾಲನಗರ, ಮಾ. ೯: ಕೃಷಿ ಚಟುವಟಿಕೆಯತ್ತ ಒಲವು ತೋರಿ ಪೊಲೀಸ್ ಇಲಾಖೆಯ ನೌಕರಿಗೆ ಸ್ವಯಂ ರಾಜೀನಾಮೆ ನೀಡಿ ಪೊಲೀಸ್ ಕಾನ್ಸ್ಟೇಬಲ್ವೊಬ್ಬರು ಕುಟುಂಬ ಸಹಿತ ತನ್ನ ಊರಿಗೆ ತೆರಳಿದ ಪ್ರಸಂಗ ವರದಿಯಾಗಿದೆ.
ತೇಜಸ್ವಿ ಕಳೆದ ಆರು ವರ್ಷಗಳಿಂದ ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸುಂಟಿಕೊಪ್ಪ, ಕುಶಾಲನಗರದಲ್ಲಿ ಸಿವಿಲ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ತಮ್ಮ ಊರಿನಲ್ಲಿ ಪೋಷಕರೊಂದಿಗೆ ಕೃಷಿ ಜಮೀನು ನೋಡಿಕೊಳ್ಳಲು ತನ್ನ ಅಗತ್ಯ ಇರುವ ಕಾರಣ ತನ್ನನ್ನು ಫೆಬ್ರವರಿ ಅಂತ್ಯಕ್ಕೆ ಬಿಡುಗಡೆಗೊಳಿಸುವಂತೆ ಕೊಡಗು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ರಾಜೀನಾಮೆ ಪತ್ರ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮನವಿ ಪತ್ರವನ್ನು ಪರಿಶೀಲಿಸಿ ತೇಜಸ್ವಿ ಅವರನ್ನು ಇಲಾಖೆಯಿಂದ ಫೆಬ್ರವರಿ ೨೮ ರಿಂದ ಬಿಡುಗಡೆಗೊಳಿಸುವಂತೆ ಆದೇಶ ಹೊರಡಿಸಿದ್ದರು.
ತೇಜಸ್ವಿ ಮೂಲತಃ ಶಿವಮೊಗ್ಗದ ಸಿರಿಗೆರೆ ನಿವಾಸಿಯಾಗಿದ್ದು ಪೋಷಕರು ಸುಮಾರು ೧೦ ಎಕರೆಗಿಂತಲೂ ಅಧಿಕ ಜಮೀನು ಹೊಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಕೃಷಿಯತ್ತ ಒಲವು ತೋರಿದ ತೇಜಸ್ವಿ ತನ್ನ ಸರಕಾರಿ ನೌಕರಿ ತೊರೆದು ಪತ್ನಿ ಇಬ್ಬರು ಮಕ್ಕಳೊಂದಿಗೆ ತನ್ನ ತವರು ಗ್ರಾಮಕ್ಕೆ ತೆರಳಿದ್ದಾರೆ.
ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ತೇಜಸ್ವಿ ಅವರನ್ನು ಸಹೊದ್ಯೋಗಿಗಳು ಸರಳ ಕಾರ್ಯಕ್ರಮ ಆಯೋಜಿಸಿ ಬೀಳ್ಕೊಟ್ಟರು.
- ಚಂದ್ರಮೋಹನ್