ಹೆಬ್ಬಾಲೆ, ಮಾ.೯ : ಸಮಾಜದಲ್ಲಿ ಮೂಢನಂಬಿಕೆ ನಿರ್ಮೂಲನೆಗೆ ಮತ್ತು ಪರಿಸರ ಜಾಗೃತಿಗಾಗಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಶ್ರಮಿಸುತ್ತಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯಕಾರ್ಯಕಾರಿಣಿ ಸದಸ್ಯ ವೆಂಕಟೇಶ್ ಹೇಳಿದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕೊಡಗು ಘಟಕದ ವತಿಯಿಂದ ಇಲ್ಲಿನ ಇಮಾಕ್ಸ್ ಕಂಪ್ಯೂಟರ್ ಎಜುಕೇಶನ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಿತಿಯ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪವಾಡ ರಹಸ್ಯ ಬಯಲು, ಖಗೋಳ ವೀಕ್ಷಣೆ, ವನ್ಯಜೀವಿ ಸಪ್ತಾಹ, ವೈಜ್ಞಾನಿಕ ವಿಚಾರ ಸಂಕಿರಣಗಳು ಮತ್ತು ಸಸಿ ನೆಡುವ ಕಾರ್ಯಕ್ರಮಗಳ ಮೂಲಕ ಜನರಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಉತ್ತೇಜಿಸುತ್ತಿದೆ ಎಂದರು. ವಿಜ್ಞಾನವನ್ನು ಜನಮಾನಸದಲ್ಲಿ ಬೆಳೆಸಿ ಇದನ್ನು ಜನವಿಜ್ಞಾನವಾಗಿಸಲು ಶ್ರಮಿಸುತ್ತಿದೆ. ಶಾಲಾ ಹಂತದAದ ಸಾರ್ವಜನಿಕರವರೆಗೆ ವಿವಿಧ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದು, ಇಂತಹ ಕಾರ್ಯಗಳಿಗೆ ಎಲ್ಲಾರ ಸಹಕಾರ ಅಗತ್ಯ ಎಂದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕೊಡಗು ಘಟಕದ ಸಲಹೆಗಾರ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ, ಜನರಲ್ಲಿ ಅಳವಾಗಿ ಬೇರೂರಿದ ಮೂಢನಂಬಿಕೆಗಳನ್ನು ಹೋಗಲಾಡಿಸಲು ಸಮಿತಿ ಪ್ರಯತ್ನಿಸುತ್ತಿದೆ. ಇಂದಿನ ಕಾಲಘಟ್ಟದಲ್ಲಿ ಜನರು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕೊಡಗು ಘಟಕದ ಅಧ್ಯಕ್ಷೆ ಸರಳಕುಮಾರಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಜ್ಞಾನ ವಿಜ್ಞಾನ ಸಮಿತಿ ಕೊಡಗು ಘಟಕದ ಜಿಲ್ಲಾ ಕಾರ್ಯದರ್ಶಿ ಎನ್.ಎಸ್.ಕುಮಾರ್, ಸದಸ್ಯರಾದ ಇ.ಸುಲೈಮಾನ್, ಹರೀಶ್ ಬಾಲಕೃಷ್ಣ, ನವೀನ್ ಇತರರು ಪಾಲ್ಗೊಂಡಿದ್ದರು. ಇದೇ ವೇಳೆ ೨೦೧೨೫ನೇ ಸಾಲಿನಲ್ಲಿ ರಾಜ್ಯ ಕೆ.ಜೆ.ವಿ.ಎಸ್. ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಮಟ್ಟದ ಬಹುಮಾನಗಳಿಸಿದ ಕೊಡಗು ಜಿಲ್ಲೆಯ ಹಾಕತ್ತೂರು ಪ್ರೌಢಶಾಲೆ ವಿದ್ಯಾರ್ಥಿ ಕುಬ್ರ ಅವರಿಗೆ ಬಹುಮಾನ ವಿತರಿಸಲಾಯಿತು.