ಕೂಡಿಗೆ, ಮಾ. ೮: ಕುಶಾಲನಗರ ತಾಲೂಕು ಗ್ರಾಮಾಂತರ ಪ್ರದೇಶಗಳಲ್ಲಿ ಕೊಳವೆ ಬಾವಿಯ ನೀರನ್ನು ಅವಲಂಬಿಸಿ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡುವ ಹಿತದೃಷ್ಟಿಯಿಂದ ಅರೆ ಮೆಕ್ಕೆಜೋಳದ ಬೆಳೆಯನ್ನು ಬೆಳೆಯಲು ರೈತರು ತೊಡಗಿಸಿಕೊಂಡಿದ್ದಾರೆ.
ಈಗಾಗಲೇ ಹಾರಂಗಿ ನಾಲೆಯಲ್ಲಿ ನೀರು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಕುಶಾಲನಗರ ತಾಲೂಕು ವ್ಯಾಪ್ತಿಯ ಕೂಡಿಗೆ, ಹೆಬ್ಬಾಲೆ, ಶಿರಂಗಾಲ, ತೊರೆನೂರು, ಅಳುವಾರ, ಸಿದ್ದಲಿಂಗಪುರ ಸೇರಿದಂತೆ ೫೦ಕ್ಕೂ ಹೆಚ್ಚು ಉಪ ಗ್ರಾಮಗಳಲ್ಲಿ ಅರೆ ಬೇಸಾಯವಾದ ಮೆಕ್ಕೆಜೋಳದ ಬೆಳೆಯನ್ನು ಬೆಳೆಯಲು ಆರಂಭಿಸಲಾಗಿದೆ.
ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚು ಹೈನುಗಾರಿಕೆಯಲ್ಲಿ ತೊಡಗಿರುವ ರೈತರ ಹಸುಗಳಿಗೆ ಮೆಕ್ಕೆಜೋಳವು ಬಹು ಮುಖ್ಯ ಆಹಾರವಾಗಿರುವುದರಿಂದ ಮೆಕ್ಕೆಜೋಳದ ಬೇಸಾಯದಲ್ಲಿ ರೈತರು ತೊಡಗಿದ್ದಾರೆ.
ಈ ಬಾರಿ ಹಾರಂಗಿ ಮುಖ್ಯ ನಾಲೆಯ ಆಧುನೀಕರಣ, ದುರಸ್ತಿ, ಜೊತೆಯಲ್ಲಿ ಇದೇ ಪ್ರಥಮವಾಗಿ ಉಪನಾಲೆಗಳ ದುರಸ್ತಿ ಕಾಮಗಾರಿಯು ನಡೆಯುತ್ತಿರುವ ಹಿನ್ನೆಲೆ ಅಂತರ್ಜಲ ಮಟ್ಟ ಈಗಾಗಲೇ ಕುಸಿತಗೊಳ್ಳುತ್ತಿದೆ. ಆದರೂ ಕುಶಾಲನಗರ ತಾಲೂಕು ವ್ಯಾಪ್ತಿಯ ೮ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ೫೦ಕ್ಕೂ ಹೆಚ್ಚು ಉಪ ಗ್ರಾಮಗಳಲ್ಲಿ ನೂರಾರು ರೈತರು ಹೈನುಗಾರಿಕೆಯಲ್ಲಿ ತೊಡಗಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಹಾಕುವ ಮೂಲಕ ತಮ್ಮ ಆರ್ಥಿಕ ಮಟ್ಟದ ಸುಧಾರಣೆಯನ್ನು ಕಾಣುತ್ತಿದ್ದಾರೆ. ಕೊಳವೆ ಬಾವಿಯ ನೀರನ್ನು ಉಪಯೋಗಿಸಿ, ಹೈಬ್ರಿಡ್ ತಳಿಯ ಹಸುಗಳಿಗೆ ಒಣ ಹುಲ್ಲಿನ ಜೊತೆಯಲ್ಲಿ ಹಸಿರು ಹುಲ್ಲಿನ ಮೇವು ನೀಡುವುದರಿಂದ ಹೆಚ್ಚು ಹಾಲನ್ನು ನೀಡುತ್ತವೆ ಎಂಬ ಭರವಸೆಯಲ್ಲಿ ರೈತರು ಅರೆ ಬೇಸಾಯವಾದ ಮೆಕ್ಕೆಜೋಳÀ ಬೆಳೆಯುವಲ್ಲಿ ತೊಡಗಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ