ಮಡಿಕೇರಿ, ಮಾ. ೮: ದೇಶಕ್ಕೆ ಸ್ವಾತಂತ್ರö್ಯ ಬಂದು ಅಮೃತ ಮಹೋತ್ಸವ ಆಚರಣೆ ಮಾಡಿ ಸಂಭ್ರಮಿಸಿದರೂ ಇಲ್ಲೊಂದು ಮೂಲನಿವಾಸಿ ಜನಾಂಗ ಇದುವರೆಗೂ ಕನಿಷ್ಟ ಸೌಲಭ್ಯಗಳೂ ಇಲ್ಲದೆ ಪ್ಲಾಸ್ಟಿಕ್ ಪರದೆಯಡಿ ಜೀವನ ಸವೆಸುತ್ತಿದೆ.

ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟೋಳಿ ಗ್ರಾಮದ ೬೦ನೇ ಸರ್ವೆ ನಂಬರಿನ ೧ನೇ ನಿವೇಶನವನ್ನು ೧೯೭೮-೭೯ ಸಾಲಿನ ಜನವರಿ ೯. ೧೯೭೯ ರಂದು ಗಿರಿಜನರ ಬೊಳ್ಳಿಯ ಮಗ ಅಪ್ಪಿ ಎಂಬಾತನ ಹೆಸರಿಗೆ ನೀಡಲಾಗಿದೆ. ಈ ಸ್ಥಳವು ಆಡಳಿತಾತ್ಮಕವಾಗಿ ಕೆದಮುಳ್ಳೂರು ಗ್ರಾಮ ಪಂಚಾಯಿತಿಗೆ ಸೇರಿದ್ದು ಕೆ. ಬೋಯಿಕೇರಿ ಅಂಚೆ ಕಚೇರಿಯ ವ್ಯಾಪ್ತಿಗೆ ಒಳಪಟ್ಟಿದೆ. ಇವರು ಗಿರಿಜನ ಪಂಗಡದ ಯರವ ಜನಾಂಗಕ್ಕೆ (ಅಲೆಮಾರಿ) ಸೇರಿದವರಾಗಿದ್ದಾರೆ. ೧೯೭೯ಕ್ಕಿಂತ ಮೊದಲೇ ಎಂದರೆ ಸುಮಾರು ೫೦ ವರ್ಷಗಳಿಗೂ ಹೆಚ್ಚಿನ ಕಾಲದಿಂದ ಇವರು ಕೆದಮುಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ಅಡಗಿರುವ ಕೊಟ್ಟೊಳ್ಳಿ ಪೈಸಾರಿಯಲ್ಲಿ ವಾಸವಾಗಿದ್ದಾರೆ. ಈಗಾಗಲೇ ಮೂರು ತಲೆಮಾರು ಕಳೆದು ನಾಲ್ಕನೆಯ ತಲೆಮಾರು ಈಗ ಚಾಲ್ತಿಯಲ್ಲಿದೆ. ಕಾಲಕ್ರಮದಲ್ಲಿ ಬೊಳ್ಳಿ ದಂಪತಿ, ಅಪ್ಪಿ ದಂಪತಿ ಮತ್ತು ಕರಿಯಣ್ಣ ಮೃತಪಟ್ಟಿದ್ದಾರೆ. ಈಗ ಕರಿಯಣ್ಣನ ಪತ್ನಿ ಗೌರಿ ವೈ. ಮತ್ತು ಮಗ ನಂದ ವೈ.ಕೆ. ಎಂಬವರು ಮೂಲ ನಿವೇಶನದ ಒಂದು ಪಾರ್ಶ್ವದಲ್ಲಿ ಚಳಿಗಾಳಿಗೆ ಸಿಲುಕಿ ವಾಸವಾಗಿದ್ದಾರೆ. ಯಾವುದೇ ಉನ್ನತ ವ್ಯಾಸಂಗ ಮಾಡಿರದ ಇವರು ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅವರು ಈಗ ವಾಸಿಸುತ್ತಿರುವ ಸ್ಥಳದಲ್ಲಿ ಬಹುಶಃ ೧೯೭೮ನೇ ಇಸವಿಗೂ ಮೊದಲೇ ಕಟ್ಟಿದ್ದರು ಎನ್ನಬಹುದಾದ ಮನೆಯ ಪಳಿಯುಳಿಕೆಯಾಗಿ ಮೋಟುಗೋಡೆಗಳು ಮಾತ್ರ ನಮ್ಮ ಸಮಾಜವನ್ನು ನೋಡಿ ನಗುತ್ತಿವೆ. ಆ ಮೋಟುಗೋಡೆಗೆ ಅಂಟಿಕೊAಡAತೆ ಮಳೆ ಗಾಳಿಯಿಂದ ರಕ್ಷಿಸಿಕೊಳ್ಳಲು ಅದಾವ ಕಾಲದಲ್ಲಿಯೋ ಕಟ್ಟಿರುವ ಪ್ಲಾಸ್ಟಿಕ್ ಹಾಳೆಗಳು ಇವೆ. ಅಲ್ಲಲ್ಲಿ ಹರಿದು ಧೂಳು, ಹೊಗೆಯ ಹೊಡೆತಕ್ಕೆ ಕಪ್ಪುಗಟ್ಟಿ ನೋಡುಗರ ಕಣ್ಣಿನಲ್ಲಿಯೂ ನೀರು ತರಿಸುವಷ್ಟು ಛಿದ್ರವಾಗಿ ಅಳುತ್ತಾ ನಿಂತಿವೆ.

ಗೋಡೆಯೇ ಇಲ್ಲದ ಕಾರಣ ಇರುವ ಕೆಲವೇ ಕೆಲವು ಆಹಾರ ಪದಾರ್ಥಗಳು, ದಿನನಿತ್ಯ ಬಳಕೆಯ ವಸ್ತುಗಳು, ಉಡುಪುಗಳನ್ನು ಮೋಟುಗೋಡೆಯ ಮೇಲ್ಗಡೆಯೇ ಇಟ್ಟುಕೊಳ್ಳಲಾಗುತ್ತಿದೆ. ಕಿಟಕಿ ಬಾಗಿಲು ಯಾವುದೂ ಇಲ್ಲದ ಈ ಗುಡಿಸಲು ಮೋಟುಗೋಡೆಗೆ ಮರದ ಕಂಬಗಳನ್ನು ನೆಟ್ಟು ಕಟ್ಟಿರುವ ಪ್ಲಾಸ್ಟಿಕ್ ಹಾಳೆಯೇ ಎಲ್ಲವೂ ಆಗಿದೆ. ಮೂಲ ಮಾಡಿನ ಸ್ವಲ್ಪ ಕೆಳ ಅಂತರದಲ್ಲಿ ಇನ್ನೊಂದು ಪುಟ್ಟ ಪ್ಲಾಸ್ಟಿಕ್ ಹಾಳೆಯನ್ನು ಅಟ್ಟಣಿಗೆಯಂತೆ ಕಟ್ಟಿಕೊಂಡಿದ್ದರೂ ಸಹ ಅದರಲ್ಲಿ ಏನೇನೂ ಪದಾರ್ಥಗಳನ್ನು ಇಟ್ಟುಕೊಂಡಿರುವುದಿಲ್ಲ. ಬಹುಶಃ ಇಟ್ಟುಕೊಳ್ಳಲು ಏನೂ ಇಲ್ಲದಿರಬಹುದು. ಅಥವಾ ಮಳೆಗಾಲದಲ್ಲಿ ಎಗ್ಗಿಲ್ಲದೇ ನುಗ್ಗುವ ಮಳೆಯ ನೀರಿನಿಂದ ಆಹಾರ ಪದಾರ್ಥಗಳಿಗೆ ರಕ್ಷಣೆ ಪಡೆಯಲು ಮಾಡಿಕೊಂಡಿದ್ದಾರೆ ಎನಿಸುತ್ತದೆ.

ಇನ್ನು ಶೌಚಾಲಯವೇ ಇಲ್ಲದ ಇವರಿಗೆ ಬಯಲು ಶೌಚಾಲಯವೇ ಆಸರೆಯಾಗಿದೆ. ಮನೆಯ ಆವರಣದ ಪಕ್ಕದಲ್ಲಿ ಅಲ್ಲಲ್ಲಿ ಹರಿದಿರುವ ಹಳೆಯ ಸೀರೆ ಮತ್ತಿತರ ವಸ್ತುಗಳನ್ನು ನಾಲ್ಕು ಸಣ್ಣ ಮರದ ಕಂಬಗಳಿಗೆ ಸುತ್ತಿರುವ ಸೂರು ಸಹಿತ ಇಲ್ಲದ ಸ್ನಾನದ ಮನೆ ಮಾತ್ರ ಇದೆ. ಕುಡಿಯಲು ಸಾರ್ವಜನಿಕ ನೀರಿನ ಬಾವಿ ಇದೆ.

ತುಂಬಾ ವರ್ಷಗಳ ಹಿಂದೆಯೇ ಮಳೆಗಾಳಿಗೆ ಸಿಲುಕಿ ಬಿದ್ದು ಹೋಗಿರಬಹುದಾದ ಮನೆಯ ಪುನರ್‌ನಿರ್ಮಾಣಕ್ಕಾಗಿ ೧೪/೧೨/೨೦೨೨ ರಂದು ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳ ಹೆಸರಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದುವರೆಗೂ ಯಾವುದೇ ರೀತಿಯ ಸಹಕಾರ ಅಥವಾ ಮಾರ್ಗದರ್ಶನ ನಮಗೆ ದೊರಕಿರುವುದಿಲ್ಲ. ಆಶ್ವಾಸನೆಯಷ್ಟೇ ದೊರೆತಿದೆ ಎಂದು ದುಃಖದಿಂದ ಅಲವತ್ತುಕೊಳ್ಳುತ್ತಾರೆ ಗೌರಿ ಮತ್ತು ನಂದ.

ಪಡಿತರ ಚೀಟಿಯೂ ಇಲ್ಲದ ಕುಟುಂಬ

ಈ ಮನೆ ನಿವೇಶನದ ಇನ್ನೊಂದು ಪಾರ್ಶ್ವದಲ್ಲಿ ಅಪ್ಪಿಯ ಇನ್ನೊಂದು ಕುಡಿ ಬೋಜಿ ಅಥವಾ ಕಾಂಜು ಎಂಬಾಕೆ ತನ್ನ ಗಂಡ ಬೊಳ್ಳಿಯೊಡನೆ ಮತ್ತೊಂದು ಪ್ಲಾಸ್ಟಿಕ್ ಹಾಳೆಯಿಂದ ರಕ್ಷಣೆ ಪಡೆದಿರುವ ಗುಡಿಸಲಿನಲ್ಲಿ ವಾಸವಾಗಿದ್ದಾರೆ. ಮಕ್ಕಳೆಲ್ಲರೂ ಬೇರೆ ಬೇರೆ ಕಡೆಯಲ್ಲಿ ವಾಸವಾಗಿದ್ದರೂ ಸಹ ಈ ಹಿರಿಯ ವೃದ್ಧ ದಂಪತಿ ಇಲ್ಲಿ ವಾಸವಾಗಿದ್ದಾರೆ. ಇವರಿಗೆ ಆಧಾರ್ ಕಾರ್ಡ್ ಇದ್ದರೂ ಪಡಿತರ ಚೀಟಿ ಇರುವುದಿಲ್ಲ. ಇವರ ಮನೆಯ ಪರಿಸ್ಥಿತಿಯೂ ಗೌರಿಯ ಮನೆಯಂತೆಯೇ ಇದೆ. ಆದರೆ ಮೋಟುಗೋಡೆಯೂ ಸಹ ಇರದ ಕೊರತೆ ಮಾತ್ರ ಕಾಣುತ್ತಿದೆ. ಇವರಿಗೂ ಸಹ ಬಯಲು ಶೌಚಾಲಯವೇ ಆಸರೆಯಾಗಿದೆ.

ಮೂರನೇ ಕುಟುಂಬ

ಈ ನಿವೇಶನದ ಅನತಿ ದೂರದಲ್ಲಿ ಇವರದೇ ಜನಾಂಗದ ಇನ್ನೊಂದು ಕುಟುಂಬ ವಾಸವಾಗಿದೆ. ಗಿರಿಜನರ ಬೊಡ್ಡು ಎಂಬಾತನ ಮಕ್ಕಳಲ್ಲಿ ಒಬ್ಬಳಾದ ಬೋಜಿ ಎಂಬಾಕೆ ಕಳೆದ ಹತ್ತು ವರ್ಷಗಳಿಂದ ತನ್ನ ಮಕ್ಕಳಾದ ಮನೋಜ್ ಮತ್ತು ಚೈತ್ರ ಇವರೊಡನೆ ವಾಸವಾಗಿದ್ದಾರೆ. ಬೊಡ್ಡುವಿಗೆ ಮಂಜೂರಾಗಿರುವ ನಿವೇಶನದಲ್ಲಿ ಬೊಡ್ಡುವಿನ ಇನ್ನೋರ್ವ ಮಗಳು ಪಾಲಿ ವಾಸವಾಗಿದ್ದಾರೆ. ಆದರೆ ಬೋಡ್ಡುವಿನ ಸಹೋದರ ಮೃತನಾಗಿದ್ದು, ಆತನಿಗೆ ಮಂಜೂರಾಗಿದ್ದ ನಿವೇಶನದಲ್ಲಿ ಬೋಜಿಯ ಕುಟುಂಬವು ಪ್ಲಾಸ್ಟಿಕ್ ಹೊದಿಕೆಯ ಗುಡಿಸಲು ಕಟ್ಟಿಕೊಂಡು ಅಂದಾಜು ಕಳೆದ ಹತ್ತು ವರ್ಷಗಳಿಂದ ವಾಸವಾಗಿದೆ. ಇವರು ಸಹ ಕೆದಮುಳ್ಳೂರು ಗ್ರಾಮ ಪಂಚಾಯಿತಿಗೆ ಮನೆಯ ನಿರ್ಮಾಣ ಮತ್ತು ಹಕ್ಕಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅರ್ಜಿ ಸಲ್ಲಿಸಿರುವುದಕ್ಕೆ ಇವರ ಬಳಿ ಯಾವುದೇ ರೀತಿಯ ದಾಖಲಾತಿಗಳು ಇರುವುದಿಲ್ಲ. ದಾಖಲಾತಿಗಳನ್ನು ಕೇಳಿದರೆ ನಮಗೆ ಯಾವುದೇ ದಾಖಲಾತಿಗಳನ್ನು ನೀಡಿಲ್ಲವೆಂದೂ, ದಾಖಲಾತಿಗಳನ್ನು ಪಡೆದುಕೊಂಡು ಹೋಗಿದ್ದಾರೆಂದೂ ನುಡಿಯುತ್ತಾರೆ ಎಂದು ಚಿತ್ರ ವೈ.ಎನ್. ಹೇಳುತ್ತಾರೆ. ಬಹಳ ಆತ್ಮವಿಶ್ವಾಸದಿಂದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ತಮಗೆ ವಾಸಯೋಗ್ಯವಾದ ಮನೆ ನಿರ್ಮಿಸಿಕೊಡುವ ನಿರೀಕ್ಷೆಯಿಂದ ಕಾಯುತ್ತಿದ್ದಾರೆ.

ಗೌರಿ ವೈ.ಕೆ.ಯ ಜೊತೆಗೆ ಮಗ ನಂದಾ ವೈ.ಕೆ. ಇವರಿಗೆ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಗಳು ಇವೆ. ಅವುಗಳಲ್ಲಿ ಕೊಟ್ಟೋಳಿ ಗ್ರಾಮ ಮತ್ತು ಕೆ. ಬೋಯಿಕೇರಿ ಅಂಚೆ ಎಂಬ ವಿಳಾಸ ನಮೂದಿಸಲ್ಪಟ್ಟಿದೆ. ಆದರೆ ಬೊಳ್ಳಿ ಮತ್ತು ಬೋಜಿ ಉರುಫ್ ಕಾಂಜುವಿನ ಹೆಸರಿನಲ್ಲಿ ಆಧಾರ್ ಕಾರ್ಡ್ ಇದೆಯಾದರೂ ಪಡಿತರ ಚೀಟಿ ಇರುವುದಿಲ್ಲ. ಗಿರಿಜನರ ಬೊಡ್ಡುವಿನ ಮಗಳು ಬೋಜಿ ಮತ್ತು ಮಕ್ಕಳ ಹೆಸರಿನಲ್ಲಿ ಆಧಾರ್ ಕಾರ್ಡ್ಗಳು, ಪಡಿತರ ಚೀಟಿಯೂ ಇವೆ. ಅವುಗಳಲ್ಲಿ ಅವರು ವಾಸವಿರುವ ಕೊಟ್ಟೊಳಿ ಗ್ರಾಮದ ಅಂಚೆ ವಿಳಾಸವಿದೆ.

ಪೈಸಾರಿ ಕೇರಿಯಲ್ಲಿ ವಾಸವಾಗಿರುವ ಈ ಮೂರು ಕುಟುಂಬಗಳ ಪೈಕಿ ಬೋಜಿ ಕುಟುಂಬದವರು ತಮ್ಮ ವಾಸಸ್ಥಳದಲ್ಲಿ ಖಾಸಗಿಯಾಗಿ ಶೌಚಾಲಯವನ್ನು ನಿರ್ಮಿಸಿಕೊಂಡಿದ್ದಾರೆ. ಉಳಿದ ಎರಡು ಕುಟುಂಬಗಳಿಗೆ ಇನ್ನೂ ಸಹ ಬಯಲು ಶೌಚಾಲಯವೇ ಆಸರೆಯಾಗಿರುವುದು ಮಾತ್ರ ಶೋಚನೀಯ ವ್ಯವಸ್ಥೆ ಎನಿಸುತ್ತದೆ. ಬಿಸಿಲು, ಚಳಿ, ಮಳೆಗೆ ಹರಿದ ಪ್ಲಾಸ್ಟಿಕ್ ಪರದೆಯಡಿ ವಾಸಿಸುತ್ತಾ ಅಳಿವಿನಂಚಿನಲ್ಲಿರುವ ಯರವ ಜನಾಂಗದ ಈ ಕುಟುಂಬಗಳಿಗೆ ಕನಿಷ್ಟ ಸೌಕರ್ಯಗಳುಳ್ಳ ವಾಸಯೋಗ್ಯ ಮನೆಗಳನ್ನು ನಿರ್ಮಿಸಿಕೊಡಲು ಸರ್ಕಾರದ ಅಧಿಕಾರಿಗಳು, ಕ್ಷೇತ್ರದ ಶಾಸಕರು ಇನ್ನಾದರೂ ಮನಸ್ಸು ಮಾಡುವರೇ ಎಂದು ಕಾದು ನೋಡಬೇಕಾಗಿದೆ..

- ವೈಲೇಶ ಪಿ.ಎಸ್