ಗೋಣಿಕೊಪ್ಪಲು, ಮಾ. ೭: ವನ್ಯಜೀವಿ ಉಪಟಳ ತಡೆಗಟ್ಟುವ ನಿಟ್ಟಿನಲ್ಲಿ ಉದ್ದೇಶಿಸಿರುವ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ೆ ಭೂಮಿಪೂಜೆ ನೆರವೇರಿಸಿದರು.
ಯೋಜನೆಗೆ ರೂ. ೨೦ ಕೋಟಿ ಅನುದಾನ ಮಂಜೂರಾಗಿದ್ದು, ತಿತಿಮತಿ ಭಾಗದ ಬೊಂಬುಕಾಡು ಕಾಲೋನಿಯಿಂದ ನೂತನ ಕಾಮಗಾರಿ ಆರಂಭವಾಗಲಿದೆ. ೭ ಕಿ.ಮೀ. ವಿಸ್ತೀರ್ಣದ ಕಾಮಗಾರಿಯು ಈ ಭಾಗದಲ್ಲಿ ನಡೆಯಲಿದ್ದು ಎರಡನೇ ಹಂತದಲ್ಲಿ ಮಾಲ್ದಾರೆ ಪಂಚಾಯಿತಿ ವ್ಯಾಪ್ತಿಯಲ್ಲಿ ೮ ಕಿ.ಮಿ. ವಿಸ್ತೀರ್ಣದ ರೈಲ್ವೆ ಬ್ಯಾರಿಕೇಡ್ ಕಾಮಗಾರಿಯು ನಡೆಯಲಿದೆ ಎಂದು ಶಾಸಕ ಪೊನ್ನಣ್ಣ ಮಾಹಿತಿ ನೀಡಿದರು.
ಈ ಭಾಗದಲ್ಲಿ ನಿರಂತರ ಕಾಡಾನೆಯ ಉಪಟಳವನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ರೈಲ್ವೆ ಬ್ಯಾರಿಕೇಡ್ ಅನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಕಾಡಾನೆಗಳು ಸಮೀಪದ ಜನನಿಬೀಡ ಪ್ರದೇಶಕ್ಕೆ ಹಾಗೂ ರೈತರ ಕಾಫಿ ತೋಟಗಳಿಗೆ ಬರುವುದನ್ನು ಒಂದಷ್ಟು ತಡೆಗಟ್ಟಬಹುದಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ನೂತನ ಬಜೆಟ್ನಲ್ಲಿ ಆನೆ ಮಾನವ ಸಂಘರ್ಷ ತಡೆಯಲು ವಿಶೇಷವಾದ ಅನುದಾನವನ್ನು ಒದಗಿಸಿರುವುದರಿಂದ ಹಂತ ಹಂತವಾಗಿ ಕಾಮಗಾರಿಗಳು ನಡೆಯಲಿವೆ. ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭ ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಪ್ರಧಾನ ಕಾರ್ಯದರ್ಶಿ ಎ.ಜೆ.ಬಾಬು, ತಿತಿಮತಿ ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪಿ.ಆರ್. ಪಂಕಜ, ಕಾಂಗ್ರೆಸ್ ಜಿಲ್ಲಾ ವಕ್ತಾರ ಆಪಟ್ಟಿರ ಟಾಟೂ ಮೊಣ್ಣಪ್ಪ, ಪ್ರಮುಖರುಗಳಾದ ವಿಲ್ಸನ್, ಡಾ.ಮದ್ಯಸ್ಥ, ಪಿಲೋಮಿನ, ಅಪ್ರೋಸ್, ಮಾರ, ಸೇರಿದಂತೆ ನಾಗರಹೊಳೆ ವನ್ಯಜೀವಿ ವಿಭಾಗದ ಎಸಿಎಫ್ ಅನನ್ಯಕುಮಾರ್, ಮತ್ತಿಗೋಡು ವಿಭಾಗದ ಆರ್ಎಫ್ಒ ದೇವರಾಜ್, ತಿತಿಮತಿ ಆರ್ಎಫ್ಒ ಗಂಗಾದರ್, ಡಿಆರ್ಎಫ್ಒ ಭರತ್, ಪೂರ್ಣಿಮ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.