ಸೋಮವಾರಪೇಟೆ, ಮಾ. ೬: ಕೊಡ್ಲಿಪೇಟೆ ಸಮೀಪದ ದೊಡ್ಡಕೊಡ್ಲಿ ಗ್ರಾಮದಲ್ಲಿ ಕೋವಿಯಿಂದ ಗುಂಡು ಸಿಡಿದು ಅವಿವಾಹಿತ ಯುವಕನೋರ್ವ ದುರ್ಮರಣಕ್ಕೀಡಾಗಿದ್ದು, ಘಟನೆಯ ಬಗ್ಗೆ ಸಂಶಯಗಳು ಹುಟ್ಟಿಕೊಂಡಿವೆ.
ದೊಡ್ಡಕೊಡ್ಲಿಯ ಹೊಸಮುನ್ಸಿಪಾಲಿಟಿ ನಿವಾಸಿ ಈರಪ್ಪ-ಲಲಿತಾ ಅವರ ಪುತ್ರ ಸಚಿನ್(೩೩) ಎಂಬವರೇ ಸಾವನ್ನಪ್ಪಿದವರಾಗಿದ್ದು, ಬಂದೂಕಿನಿAದ ಸಿಡಿದ ಗುಂಡು ಸಚಿನ್ ಅವರ ಹೊಟ್ಟೆಯ ಎಡಭಾಗಕ್ಕೆ ಹೊಕ್ಕು ಜೀವ ತೆಗೆದಿದೆ.
ಈ ಬಗ್ಗೆ ಮೃತರ ತಾಯಿ ಲಲಿತಾ ಅವರು ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇದರಲ್ಲಿ ಕಾಫಿ ತೋಟಕ್ಕೆ ಕರಿಮೆಣಸು ಕೊಯ್ಲು ಮಾಡಲೆಂದು ತೆರಳಿದ ತನ್ನ ಮಗ ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಈ ನಡುವೆ ಸಂಬAಧಿಕರೋರ್ವರು ಮನೆಗೆ ಆಗಮಿಸಿ ಮಗನಿಗೆ ಕೋವಿಯಿಂದ ಗುಂಡು ತಗುಲಿ ಪೆಟ್ಟಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿಸಿದರು. ತಾನು ಹಾಸನದ ಆಸ್ಪತ್ರೆಗೆ ತೆರಳಿ ಪರಿಶೀಲಿಸಿದ ಸಂದರ್ಭ ಕೋವಿಯಿಂದ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಹೊಟ್ಟೆಯ ಭಾಗಕ್ಕೆ ಗುಂಡು ತಗುಲಿ ಸಾವನ್ನಪ್ಪಿರುವುದು ತಿಳಿದುಬಂತು. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರನ್ನು ಸ್ವೀಕರಿಸಿದ ಪೊಲೀಸರು ಘಟನೆಯ ಬಗ್ಗೆ ತನಿಖೆ ಮುಂದುವರೆಸಿದ್ದು, ಈರ್ವರನ್ನು ವಶಕ್ಕೆ ಪಡೆದಿದ್ದಾರೆ. ನೂತನ ಬಿಎನ್‌ಎಸ್ ಕಾಯ್ದೆ ೧೦೦ರ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೋವಿಯ ಮಾಲೀಕ ರವಿ ಹಾಗೂ ಜೊತೆಗಾರ ದಿವಾಕರ ಅವರುಗಳನ್ನು ವಶಕ್ಕೆ ಪಡೆದಿದ್ದಾರೆ. ಇವರೀರ್ವರೂ ಮೃತರ ಸಂಬAಧಿಕರೆAದು ತಿಳಿದು ಬಂದಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಸಂಶಯಗಳು ಹುಟ್ಟಿಕೊಂಡಿವೆ. ಬೇಟೆಗೆ ತೆರಳಿದ ಸಂದರ್ಭ ಜೊತೆಗಾರರ ಬಳಿಯಿದ್ದ ಕೋವಿಯಿಂದ ಗುಂಡು ಸಿಡಿದು ದುರ್ಘಟನೆ ನಡೆದಿದೆ ಎಂಬ ಮಾತುಗಳೂ ಕೇಳಿಬರುತ್ತಿದ್ದು, ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಮಂಗಗಳನ್ನು ಬೆದರಿಸಲು ಕೋವಿಯನ್ನು ತೆಗೆದುಕೊಂಡು ಹೋಗಲಾಗಿತ್ತು. ಈ ಸಂದರ್ಭ ಆಕಸ್ಮಿಕವಾಗಿ ಗುಂಡು ತಗುಲಿದೆ ಎಂದು ಕೆಲವರು ಹೇಳಿದ್ದಾರೆ. ಘಟನೆ ತೋಟದಲ್ಲಿ ನಡೆದಿದೆಯೋ ಅಥವಾ ಕಾಡಂಚಿನ ಪ್ರದೇಶದಲ್ಲಿ ನಡೆದಿದೆಯೋ ಎಂಬ ಬಗ್ಗೆಯೂ ಗೊಂದಲವಿದೆ. ಇಂತಹ ಹೇಳಿಕೆಗಳಿಂದ ಪೊಲೀಸರಲ್ಲೂ ಗೊಂದಲ ಸೃಷ್ಟಿಯಾಗಿದೆ. ಈ ಹಿನ್ನೆಲೆ ಬಿಎನ್‌ಎಸ್ ಕಾಯ್ದೆ ೧೦೦ರ ಅನ್ವಯ ಮೊಕದ್ದಮೆ ದಾಖಲಿಸಿಕೊಂಡು ತನಿಖೆಯನ್ನು ಚುರುಕುಗೊಳಿಸಲಾಗಿದೆ. ನಿನ್ನೆ ಅಪರಾಹ್ನ ೩ ರಿಂದ ೩.೩೦ರ ಸಮಯದಲ್ಲಿ ಘಟನೆ ನಡೆದಿದ್ದು, ತೀವ್ರವಾಗಿ ಗಾಯಗೊಂಡಿದ್ದ ಸಚಿನ್ ಅವರನ್ನು ಕಾರಿನಲ್ಲಿಯೇ ಹಾಸನ ಆಸ್ಪತ್ರೆಗೆ ಸಾಗಿಸಲಾಗಿದೆ. ವೈದ್ಯರು ಪರೀಕ್ಷಿಸಿದ ಸಂದರ್ಭ ಅಷ್ಟರಲ್ಲಾಗಲೇ ಮೃತಪಟ್ಟಿರುವ ಬಗ್ಗೆ ದೃಢಪಡಿಸಿದ್ದಾರೆ.
ಇಂದು ಆಸ್ಪತ್ರೆಗೆ ಶನಿವಾರಸಂತೆ ಪೊಲೀಸ್ ವೃತ್ತ ನಿರೀಕ್ಷಕ ಕೃಷ್ಣರಾಜು ಹಾಗೂ ತಂಡ ತೆರಳಿ ಪರಿಶೀಲನೆ ನಡೆಸಿದ್ದು, ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ವಾರೀಸುದಾರರಿಗೆ ಹಸ್ತಾಂತರಿಸಲಾಯಿತು.
ಘಟನೆಯ ಬಗ್ಗೆ ಹಲವಷ್ಟು ಸಂಶಯಗಳು ಹುಟ್ಟಿಕೊಂಡಿರುವ ಹಿನ್ನೆಲೆ ತನಿಖಾಧಿಕಾರಿಯೂ ಆಗಿರುವ ಪೊಲೀಸ್ ಇನ್ಸ್ಪೆಕ್ಟರ್ ಕೃಷ್ಣರಾಜು ಅವರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈಗಾಗಲೇ ವಶಕ್ಕೆ ಪಡೆದಿರುವ ಈರ್ವರಿಂದ ಮಾಹಿತಿ ಕಲೆಹಾಕುತ್ತಿದ್ದಾರೆ. ಕೃತ್ಯ ನಡೆದ ಸ್ಥಳ, ಯಾರೆಲ್ಲ ಇದ್ದರು? ಯಾವ ಕಾರಣದಿಂದಾಗಿ ಕೃತ್ಯ ನಡೆಯಿತು? ನಿಜಕ್ಕೂ ಬೇಟೆಗೆ ತೆರಳಿದ್ದರೇ? ಘಟನೆ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ? ಎಂಬಿತ್ಯಾದಿ ವಿಚಾರಗಳ ಬಗ್ಗೆ ತನಿಖೆ ನಡೆಯುತ್ತಿದ್ದು, ಪೊಲೀಸರ ಪೂರ್ಣ ಪ್ರಮಾಣದ ತನಿಖೆಯಿಂದಷ್ಟೇ ಸತ್ಯಾಂಶ ಬೆಳಕಿಗೆ ಬರಬೇಕಿದೆ.