ಸೋಮವಾರಪೇಟೆ, ಮಾ. ೬: ವಿದ್ಯಾರ್ಥಿ ಗಳು ಸ್ವಯಂ ಅಧ್ಯಯನಶೀಲತೆಯನ್ನು ಅಳವಡಿಸಿ ಕೊಳ್ಳಬೇಕು. ಹೀಗಾದಲ್ಲಿ ಉತ್ತಮ ಅಂಕಗಳನ್ನು ಪಡೆಯಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಕರೆ ನೀಡಿದರು.

ಇಲ್ಲಿನ ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ನಡೆದ ಆರ್ಶೀವಾದ ದಿನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಯಾರಿಗೂ ಪರೀಕ್ಷಾ ಭಯ ಇಲ್ಲ. ಈಗಾಗಲೇ ಎರಡು ಬಾರಿ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಮಾಡಲಾಗಿದೆ. ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಬರೆದಿದ್ದಾರೆ. ಪ್ರಸಕ್ತ ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯದಲ್ಲಿ ಮೊದಲ ಅಥವಾ ಎರಡನೇ ಸ್ಥಾನವನ್ನು ಕೊಡಗು ಜಿಲ್ಲೆ ಪಡೆದುಕೊಳ್ಳಲು ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ಪ್ರಯತ್ನ ಮಾಡಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಏಕಾಗ್ರತೆ, ಶಿಸ್ತು, ಸಮಯಪಾಲನೆ, ಗುರಿಯೊಂದಿಗೆ ಕಲಿಕೆ ಮುಂದುವರಿಸಬೇಕು. ಮೊಬೈಲ್‌ನಿಂದ ದೂರವಿರಬೇಕು. ಶಿಕ್ಷಕರು ಮತ್ತು ಪೋಷಕರು ವಿದ್ಯಾರ್ಥಿಗಳಿಗೆ ಸೂಕ್ತ ಸಲಹೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಮಾತನಾಡಿ, ಪರೀಕ್ಷೆ ಎಂಬುದು ಭಯಪಡುವ ವಿಷಯವಲ್ಲ, ಅದು ನಿಮ್ಮ ಪರಿಶ್ರಮವನ್ನು ತೋರಿಸುವ ಅವಕಾಶ. ಗುರಿ ಸ್ಪಷ್ಟವಾಗಿರಲಿ, ಸಮಯದ ಮೌಲ್ಯ ತಿಳಿದುಕೊಳ್ಳಬೇಕು. ಶಿಸ್ತು, ಧೈರ್ಯ ಮತ್ತು ಆತ್ಮವಿಶ್ವಾಸವೇ ಯಶಸ್ಸಿನ ಗುಟ್ಟು. ನೀವು ಸಾಧಿಸಿದರೆ ನಿಮ್ಮ ಕುಟುಂಬಕ್ಕೂ ಸಂಸ್ಥೆಗೂ ಹೆಮ್ಮೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕ್ರೀಡೆ, ಕಲಿಕೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ೪ನೇ ರ‍್ಯಾಂಕ್ ಪಡೆದ ಕುವೆಂಪು ಶಾಲೆಯ ಸಿ.ಎಸ್. ಆದ್ವಿ, ೫ನೇ ರ‍್ಯಾಂಕ್ ಪಡೆದ ಕೆ.ಸಿ. ಪಂಚಮಿ, ೭ನೇ ರ‍್ಯಾಂಕ್ ಪಡೆದ ತೇಜಸ್ವಿನಿ ಅವರುಗಳ ಪೋಷಕರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಎಸ್.ಬಿ. ಭರತ್ ಕುಮಾರ್, ಕಾರ್ಯದರ್ಶಿ ಎನ್.ಬಿ. ಗಣಪತಿ, ಖಜಾಂಚಿ ಲಿಂಗರಾಜು, ಮಾಜಿ ಎಂಎಲ್‌ಸಿ ಎಸ್.ಜಿ. ಮೇದಪ್ಪ ಸಂಸ್ಥೆಯ ಪ್ರಾಂಶುಪಾಲರಾದ ಮಿಲ್ಗ್ರೆಡ್ ಗೊನ್ಸಾಲ್ವೆಸ್ ಮತ್ತು ನಿರ್ದೇಶಕರುಗಳು ಇದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕಮ ನಡೆಯಿತು.

ವಿದ್ಯಾರ್ಥಿನಿಯರಾದ ನಮನ, ಸುಹೈಲಾ, ದ್ವಿತಿ, ವೈಷ್ಣವಿ, ಕೀರ್ತನಾ, ಸ್ವಸ್ತಿ, ಜ್ಞಾನ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.