ಸೋಮವಾರಪೇಟೆ, ಮಾ. ೫: ಇಲ್ಲಿನ ಎಸ್‌ಜೆಎಂ ಶಾಲೆಯಲ್ಲಿ ಅಂತರ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವೀರಶೈವ ಸಮಾಜದ ತಾಲೂಕು ಯುವ ಘಟಕದ ಅಧ್ಯಕ್ಷ ಡಿ.ವಿ. ಕಿರಣ್‌ಕುಮಾರ್, ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಉತ್ತೇಜಿಸುವ ಕಾರ್ಯಕ್ರಮಗಳು ಹೆಚ್ಚು ನಡೆದಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಸರ್ಕಾರ ಶಾಲೆಗಳ ಉಳಿವಿಗೆ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುತ್ತಿದೆ. ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡುವುದರೊಂದಿಗೆ, ಇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಸರ್ಕಾರಿ ಶಾಲೆ ಉಳಿವಿಗೆ ಶಿಕ್ಷಕರು ಹಾಗೂ ಪೋಷಕರು ಮುಂದಾಗಬೇಕೆAದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಎಚ್. ಮಾರಪ್ಪ ವಹಿಸಿದ್ದರು. ವೇದಿಕೆಯಲ್ಲಿ ಸಾಹಿತಿ ನ.ಲ. ವಿಜಯ, ಮೋಟಾರ್ ಯೂನಿಯನ್ ಉಪಾಧ್ಯಕ್ಷ ರಂಗಸ್ವಾಮಿ, ಕಾರ್ಯದರ್ಶಿ ಮಣಿ ಕುಶಾಲಪ್ಪ, ಶಾಲಾ ಶಿಕ್ಷಕರಾದ ರಾಣಿ ರವೀಂದ್ರ, ಶಿವಪ್ರಸಾದ್, ಜಯಮ್ಮ, ಧನ್ಯ, ನೇತ್ರ ಇದ್ದರು.
ವಿದ್ಯಾರ್ಥಿಗಳಿಗೆ ನಡೆದ ವಿಜ್ಞಾನ ಪ್ರದರ್ಶನ ಸ್ಪರ್ಧೆಯಲ್ಲಿ ೯ನೇ ತರಗತಿ ವಿದ್ಯಾರ್ಥಿನಿ ಕೆ.ಎ. ಸುಕನ್ಯಾ ಪ್ರಥಮ, ಕೆ.ಎ. ಆರ್ಯ ದ್ವಿತೀಯ, ಎಸ್.ಕೆ. ಶ್ರೇಯ ತೃತೀಯ ಹಾಗೂ ಕೆ.ಕೆ. ರಾಜೇಶ್ವರಿ ನಾಲ್ಕನೇ ಬಹುಮಾನ ಪಡೆದರು.