ವೀರಾಜಪೇಟೆ, ಮಾ.೫: ಧರ್ಮಗಳು ಕಲಿಸುವ ಪ್ರಾಮಾಣಿಕತೆ, ಕಾರುಣ್ಯ, ಸಹಾನುಭೂತಿ, ದಯೆ, ಪ್ರೀತಿ ಮುಂತಾದ ಒಳಿತುಗಳು ಸಾರ್ವತ್ರಿಕವಾಗಬೇಕು ಎಂದು ಎಲ್ಲಾ ಧರ್ಮಗಳು ಬಯಸುತ್ತಾರೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರಲಿ ಉಡುಪಿ ಅವರು ಹೇಳಿದರು.
ವೀರಾಜಪೇಟೆಯ ನಿಸರ್ಗ ಬಡಾವಣೆಯ ದೈವಜ್ಞ ಸಮಾಜ ಸಭಾಂಗಣದಲ್ಲಿ ಸದ್ಭಾವನಾ ಮಂಚ್ ಏರ್ಪಡಿಸಿದ್ದ ಇಫ್ತಾರ್ ಸೌಹಾರ್ದ ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಇಸ್ಲಾಮಿನ ಉಪವಾಸ ವ್ರತವು ಮನುಷ್ಯನನ್ನು ಕೆಡುಕಿನಿಂದ ತಡೆಯುತ್ತದೆ. ಆಹಾರ ಸೇವನೆಯೂ ಸೇರಿದಂತೆ ಮನುಷ್ಯನ ಮೂಲಭೂತ ಅಗತ್ಯಗಳನ್ನು ನಿಯಂತ್ರಣದಲ್ಲಿಡಲು ಅದು ಕಲಿಸುತ್ತದೆ. ಪವಿತ್ರ ಕುರ್‌ಆನ್ ಅವತರಿಸಿದ ತಿಂಗಳು ಎಂಬ ನೆಲೆಯಲ್ಲಿ ರಮಝಾನಿಗೆ ಮಹತ್ವವಿದೆ ಎಂದು ಹೇಳಿದರು.
ವೀರಾಜಪೇಟೆ ಸೈಂಟ್ ಆನ್ಸ್ ಚರ್ಚ್ನ ಪ್ರಧಾನ ಧರ್ಮಗುರುಗಳಾದ ರೆ||.ಫಾ|.ಜೇಮ್ಸ್ ಡೊಮಿನಿಕ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜಗತ್ತಿನ ಎಲ್ಲಾ ಮುಖ್ಯವಾಹಿನಿ ಧರ್ಮಗಳಲ್ಲಿಯೂ ಉಪವಾಸ ವ್ರತವು ವಿವಿಧ ರೀತಿಗಳಲ್ಲಿ ಆಚರಣೆಯಲ್ಲಿ ಇವೆ. ಮನುಷ್ಯನು ದೇವ ನಿಷ್ಠೆಯನ್ನು ಹೊಂದಬೇಕು ಎಂಬುದು ಉಪವಾಸದ ಉದ್ದೇಶವಾಗಿದೆ. ದೇವನ ಮಾರ್ಗದರ್ಶನದ ಮೇಲೆ ಯಾರಿಗೂ ಏಕಸ್ವಾಮ್ಯವಿಲ್ಲ. ಅದು ಯಾರದೇ ಖಾಸಗಿ ಸ್ವತ್ತು ಅಲ್ಲ ಎಂದು ಹೇಳಿದರು.
ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಅಮ್ಮುಣಿಚಂಡ ರವಿ ಉತ್ತಪ್ಪ, ಉಪಾಧ್ಯಕ್ಷ ಕಾಣತಂಡ ಜಗದೀಶ್, ಸದ್ಭಾವನಾ ಮಂಚ್ ಹಿರಿಯ ಸದಸ್ಯರುಗಳಾದ ಕೆ.ಪಿ ರಷೀದ್, ಎ.ಸಿ ಚೋಪಿ ಜೋಸೆಫ್, ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಅಧ್ಯಕ್ಷ ಕೆ.ಪಿ.ಕೆ. ಮುಹಮ್ಮದ್ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಶಾಸಕ ಎ.ಎಸ್ ಪೊನ್ನಣ್ಣ ಔತಣಕೂಟದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು. ಉಮರ್ ಅಬ್ದುಲ್ಲಾರವರ ಕುರ್‌ಆನ್ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯ್ತು. ಸದ್ಭಾವನಾ ಮಂಚ್ ಕಾರ್ಯದರ್ಶಿ ಪಿ.ಕೆ. ಅಬ್ದುಲ್ ರೆಹೆಮಾನ್. ಕೆ.ಟಿ.ಬಷೀರ್ ಇದ್ದರು.