ಸೋಮವಾರಪೇಟೆ, ಮಾ.೩: ಕಳೆದ ತಾ.೨೮ ರಂದು ಕೂತಿ ಗ್ರಾಮದ ವಾಂಟ್ಲು ಗದ್ದೆಯಲ್ಲಿ ಕುರಿಗಳ ಮೇಲೆ ಧಾಳಿ ಮಾಡಿ, ಒಂದು ಕುರಿಯನ್ನು ಬಲಿಪಡೆದು, ಮತ್ತೊಂದು ಕುರಿಯನ್ನು ಗಾಯಗೊಳಿಸಿದ ಚಿರತೆಯನ್ನು ಪತ್ತೆಮಾಡಿ ವಾರದೊಳಗೆ ಸೆರೆಹಿಡಿಯಬೇಕೆಂದು ಶಾಸಕ ಡಾ. ಮಂತರ್ ಗೌಡ ಅರಣ್ಯ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ವಾಂಟ್ಲುಗದ್ದೆ ಗ್ರಾಮದ ನಿವಾಸಿ ಹೆಚ್.ಎ.ಬಸಪ್ಪ ಅವರು ಸಾಕಿದ್ದ ಕುರಿಗಳ ಮೇಲೆ ಚಿರತೆ ದಾಳಿ ನಡೆಸಿದ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲಿಸಿದ ಶಾಸಕರು ಸ್ಥಳೀಯ ನಿವಾಸಿಗಳೊಂದಿಗೆ ಮಾಹಿತಿ ಪಡೆದರು.
ಕುರಿಗಳ ಮೇಲೆ ಚಿರತೆ ಧಾಳಿ ನಡೆಸಿರುವುದರಿಂದ ಈ ಭಾಗದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮಕ್ಕಳು, ಜನಸಾಮಾನ್ಯರು ಓಡಾಡಲು ಹೆದರಿಕೆಯಾಗುತ್ತಿದೆ. ದನಕರುಗಳನ್ನು ಮೇಯಲು ಬಿಡಲೂ ಹಿಂಜರಿಯುವAತಾಗಿದೆ ಎಂದು ಸ್ಥಳೀಯರು ಶಾಸಕರ ಗಮನಕ್ಕೆ ತಂದರು.
ಕುರಿಗಳ ಮೇಲೆ ಧಾಳಿ ನಡೆಸಿರುವ ಚಿರತೆಯ ಪತ್ತೆಗೆ ಅರಣ್ಯ ಇಲಾಖಾ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ವಲಯ ಅರಣ್ಯಾಧಿಕಾರಿ ಶೈಲೇಂದ್ರಕುಮಾರ್ ಹೇಳಿದರು. ಈಗಾಗಲೇ ಗ್ರಾಮಸ್ಥರಲ್ಲಿ ಭಯ ಉಂಟಾಗಿದೆ. ಮಾನವರ ಮೇಲೆ ಚಿರತೆ ಧಾಳಿ ಮಾಡಿದರೆ ದುರಂತ ಸಂಭವಿಸಲಿದೆ. ಒಂದು ವಾರದ ಒಳಗಾಗಿ ಚಿರತೆಯನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳಬೇಕೆಂದು ಶಾಸಕ ಮಂತರ್ ಗೌಡ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ಸಂದರ್ಭ ತಾ.ಪಂ. ಮಾಜೀ ಅಧ್ಯಕ್ಷ ಕೆ.ಎಂ. ಲೋಕೇಶ್, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಬಿ. ಬಿ. ಸತೀಶ್, ಪ್ರಮುಖರಾದ ಮಧು ಕುಮಾರ್ ಸೇರಿದಂತೆ ಇತರರು ಇದ್ದರು.