ಚೆಟ್ಟಳ್ಳಿ, ಮಾ. ೩: ಚೆಟ್ಟಳ್ಳಿಯ ಕೋಗಿಲೆಹಳ್ಳ ಎಸ್ಟೇಟ್‌ನ ಲೈನ್‌ಮನೆಯಲ್ಲಿ ವಾಸವಾಗಿದ್ದ ಕಾರ್ಮಿಕ ಒರಿಸ್ಸಾದ ಅಶ್ವಿನಾ ಗೊಮಾಗೊ ಎಂಬಾತನನ್ನು ಅದೇ ಎಸ್ಟೇಟ್‌ನ ಕಾರ್ಮಿಕ ಮಹೇಶ್ ಎಂಬಾತ ಕಾಫಿತೋಟದಲ್ಲಿ ಹತ್ಯೆಗೈದಿರುವ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ಮಧ್ಯಾಹ್ನ ಸುಮಾರು ೧.೪೦ ಗಂಟೆಗೆ ಮಹೇಶ್ ಅಶ್ವಿನಾ ಗೋಮಾಗೊನನ್ನು ಅಂಗಡಿಗೆ ಹೋಗುವ ನೆಪದಲ್ಲಿ ಮನೆಯಿಂದ ಕರೆದುಕೊಂಡು ಹೋಗಿದ್ದ. ನಂತರ ಮಹೇಶ್ ಒಬ್ಬನೇ ಮನೆಗೆ ವಾಪಸ್ಸಾಗಿದ್ದು, ಅಶ್ವಿನಾ ಗೊಮಾಗೊ ಮನೆಗೆ ಮರಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಂಜೆ ವೇಳೆಗೆ ಪತ್ನಿ ಹಾಗೂ ನೆರೆಹೊರೆಯವರು ಕಾಫಿ ತೋಟದಲ್ಲಿ ಹುಡುಕಾಟ ನಡೆಸಿದಾಗ ತೋಟದ ಬೇಲಿಯ ಸಮೀಪ ಕಾಫಿ ಗಿಡದ ಕೆಳಗೆ ಅಶ್ವಿನಾ ಗೋಮಾಗೊನ ಮೃತದೇಹ ಪತ್ತೆಯಾಗಿದೆ. ಮೃತದೇಹದ ಮುಖಭಾಗದಲ್ಲಿ ರಕ್ತ ಗಾಯಗಳು ಕಂಡು ಬಂದಿದೆ. ಅಶ್ವಿನಾ ಗೋಮಾಗೊ ಹಾಗೂ ಮಹೇಶ್ ನಡುವೆ ವೈಯಕ್ತಿಕ ವಿಚಾರಕ್ಕೆ ಸಂಬAಧಿಸಿದAತೆ ಈ ಹಿಂದೆ ಜಗಳವಾಗಿದ್ದು, ಈ ವೈಷಮ್ಯದ ಹಿನ್ನೆಲೆಯಲ್ಲಿ ಕೃತ್ಯ ನಡೆದಿದೆ ಎನ್ನಲಾಗಿದೆ.

ಆರೋಪಿ ಮಹೇಶ್ ಚೆಟ್ಟಳ್ಳಿ ಠಾಣೆಗೆ ಬಂದು ತಾನೇ ಕೊಲೆ ಮಾಡಿರುವುದಾಗಿ ಶರಣಾಗಿದ್ದಾನೆ. ನಿನ್ನೆ ರಾತ್ರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್ ಬಿಂದುಮಣಿ, ಮಡಿಕೇರಿ ಡಿವೈಎಸ್ಪಿ ಸೂರಜ್, ಗ್ರಾಮಾಂತರ ಸಿಪಿಐ ಚಂದ್ರಶೇಖರ್, ಅಪರಾಧ ವಿಭಾಗದ ಸಿಬ್ಬಂದಿ, ಚೆಟ್ಟಳ್ಳಿ ಉಪ ಠಾಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಆರೋಪಿ ಮಹೇಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

-ವರದಿ: ಕರುಣ್ ಕಾಳಯ್ಯ