ಅನಿಲ್ ಎಚ್.ಟಿ.
ಮಂಜು ಮುಸುಕನ್ನು ಬೇಧಿಸಿಕೊಂಡು ಸೂರ್ಯನ ಕಿರಣಗಳು ಪಸರಿಸುತ್ತಿದ್ದಂತೆಯೇ .., ಅವರ ಕೈಯಲ್ಲಿ, ಇವರ ಕೈಯಲ್ಲಿ, ಅವರ ಮಡಿಲಲ್ಲಿ, ಇವರ ಕಣ್ಣೋಟದಲ್ಲಿ.. ಹೀಗೆ ಎಲ್ಲೆಲ್ಲೂ ಕಂಗೊಳಿಸುವ ಪತ್ರಿಕೆಯಾಗಿ ಶಕ್ತಿ ಎಂಬ ಕೊಡಗಿನ ಶಕ್ತಿಯುತ ಪತ್ರಿಕೆ ಕಂಡುಬರುತ್ತದೆ.
ಕೊಡಗಿನ ಯಾವುದೇ ನಗರ, ಗ್ರಾಮಗಳಲ್ಲಿ ಯಾವುದೇ ಬೆಳಗ್ಗೆ ಒಂದು ರೌಂಡ್ ಬಂದದ್ದೇ ಆದಲ್ಲಿ ಶಕ್ತಿ ಹಿಡಿದಿರುವ ನೂರಾರು ಕೈಗಳು ಖಂಡಿತಾ ಕಾಣಲು ಸಿಕ್ಕುತ್ತವೆ. ಮನೆಮುಂದೆ ಹಾಜರಾತಿ ತೋರಿರುವ ಶಕ್ತಿ, ಅಂಗಡಿಯ ಮುಚ್ಚಿದ ಬಾಗಿಲಿಗೆ ಸಿಕ್ಕಿಸಿರುವ ಶಕ್ತಿ, ಲಾಡ್ಜ್ನ ಪೇಪರ್ ಸ್ಟಾಂಡ್‌ಗೆ ಸಿಕ್ಕಿಕೊಂಡಿರುವ ಶಕ್ತಿ, ಬಸ್‌ಗಳಲ್ಲಿ ಟಿಕೇಟ್ ಪಡೆಯುವುದನ್ನೇ ಮರೆತಂತೆ ತನ್ಮಯರಾಗಿ ಶಕ್ತಿ ಓದುತ್ತಿರುವ ಪ್ರಯಾಣಿಕರು, ಶಾಲೆಗಳಲ್ಲಿನ ಅಸೆಂಬ್ಲಿಗಳಲ್ಲಿ ಶಕ್ತಿಯ ಸುದ್ದಿಗಳನ್ನೇ ಭಕ್ತಿಯಿಂದ ಓದುವ ವಿದ್ಯಾರ್ಥಿ, ಸರ್ಕಾರಿ ಕಚೇರಿಗಳಲ್ಲಿ ಕೆಲಸ ಪ್ರಾರಂಭಿಸುವ ಮುನ್ನ ಶಕ್ತಿಯೊಳಗೆ ಹೊಕ್ಕು ಸುದ್ದಿ ವಿಶೇಷತೆ ಗಮನಿಸುವ ಕುತೂಹಲದ ಕಣ್ಣುಗಳು.. ಹೀಗೆ ಕೊಡಗಿನಾದ್ಯಂತ ಸುತ್ತು ಹಾಕಿ ಬಂದಾಗ ಗೊತ್ತಾಗುವ ಸ್ಪಷ್ಟ ವಿಚಾರವೆಂದರೆ.. ಶಕ್ತಿಯ ಅಗಾಧ ಶಕ್ತಿ.. !!
ಶಕ್ತಿ - ಕೊಡಗಿನ ಜನರ ಮನದಲ್ಲಿ ನೆಲೆನಿಂತು ೭ ದಶಕಗಳಿಗೆ ಇನ್ನು ಕೇವಲ ೧ ವರ್ಷ ಮಾತ್ರ ಬಾಕಿಯಿದೆ. ತಮ್ಮದೇ ಮನೆ ಸದಸ್ಯನಂತೆ ಶಕ್ತಿಯನ್ನೂ ಕೊಡಗಿನ ಓದುಗರು ಅಭಿಮಾನದಿಂದ ಕಾಣುತ್ತಾರೆ, ವಿಶ್ವಾಸದಿಂದ ಪ್ರತಿನಿತ್ಯ ಬರಮಾಡಿಕೊಳ್ಳುತ್ತಾರೆ. ಪ್ರೀತಿಯಿಂದ ಓದುತ್ತಾರೆ. ಇದಕ್ಕೆಲ್ಲಾ ಮುಖ್ಯ ಕಾರಣ ಎಂದರೆ, ಶಕ್ತಿ ಅಂದಿನAತೆ ಇಂದಿಗೂ ಸುದ್ದಿಯಲ್ಲಿ ಕಾಪಾಡಿಕೊಂಡು ಬಂದಿರುವ ಸತ್ಯ ನಿಷ್ಠೆ.
ಶಕ್ತಿಯಲ್ಲಿ ಸುದ್ದಿ ಬರಲಿಲ್ಲ ಎಂದರೆ ಅದು ಸುದ್ದಿಯೇ ಅಲ್ಲ. ಅಥವಾ ಅಂಥ ಘಟನೆಯೇ ಆಗಿಲ್ಲ ಎಂದು ಕೊಡಗಿನ ಓದುಗರು ನಂಬಿದ್ದಾರೆ. ಪತ್ರಿಕೆಯೊಂದು ಕಾಯ್ದುಕೊಂಡಿರುವ ಓದುಗರ ನಂಬಿಕೆಗೆ ಶಕ್ತಿಯೇ ಸಾಕ್ಷಿಯಾಗಿದೆ. ಅಂಥ ವಿಶ್ವಾಸವನ್ನು ಉಳಿಸಿಕೊಂಡಿದ್ದೇ ಶಕ್ತಿ ಕಳೆದ ವರ್ಷಗಳಿಂದ ಜನಮನದ ಶಕ್ತಿಯಾಗಿಯೇ ಬೆಳೆದು ಬರಲು ಕಾರಣವಾಗಿದೆ.
ಕೊಡಗಿನ ಅಭಿವೃದ್ಧಿ ಸಂಬAಧಿತ ಸುದ್ದಿಗಳು, ಅಪರಾಧ ಪ್ರಕರಣ, ರಾಜಕೀಯಕ್ಕೆ ಸಂಬAಧಿಸಿದ ಕಾರ್ಯಕ್ರಮಗಳು, ವಿಶ್ಲೇಷಣೆಗಳು, ಕ್ರೀಡೆ, ಮಾನವೀಯ ವರದಿಗಳು, ಸಮಸ್ಯೆಗೆ ಸ್ಪಂದನ ದೊರಕುವಂಥ ವರದಿಗಳು, ಹೀಗೆ ಶಕ್ತಿ ತನ್ನ ಮುದ್ರಣ ಮಾಧ್ಯಮದ ಮೂಲಕ ದಿನನಿತ್ಯ ಓದುಗರಿಗೆ ಕೊಡಗು ಮಾತ್ರವಲ್ಲದೇ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟಿçÃಯ ಮಟ್ಟದ ಆಗುಹೋಗುಗಳ ಮಾಹಿತಿ ನೀಡುತ್ತಾ ಬಂದಿದೆ. ಇಂಥ ಸುದ್ದಿ ನೀಡಲು ಸಶಕ್ತ ಸುದ್ದಿಗಾರರ ತಂಡ ಶಕ್ತಿಯ ಶಕ್ತಿಯಾಗಿ ಇರುವುದು ಮತ್ತೊಂದು ಹೆಗ್ಗಳಿಕೆಯಾಗಿದೆ.
ಜಿಲ್ಲಾ ಮಟ್ಟದ ಪತ್ರಿಕೆಯೊಂದು ಪ್ರತಿ ನಿತ್ಯ ೧ ಪುಟವನ್ನು ಸಾಹಿತ್ಯ, ಸಾಂಸ್ಕೃತಿಕ ವಿಚಾರಗಳಿಗೆ ಮೀಸಲಿಟ್ಟಿರುವುದು ಶಕ್ತಿಯ ವಿಶೇಷತೆಯೇ ಹೌದು. ಈ ಸಾಹಿತ್ಯ ಪುಟದಲ್ಲಿ ಕೊಡಗಿನ ನೂರಾರು ಲೇಖಕ, ಲೇಖಕಿಯರು ಬರೆಯುವ ಮೂಲಕ ಸಾಹಿತ್ಯಲೋಕಕ್ಕೆ ಅನೇಕ ಬರಹಗಾರರನ್ನೂ ಕೊಡುಗೆಯಾಗಿ ನೀಡಿದ ಹಿರಿಮೆಯೂ ಶಕ್ತಿಯದ್ದು. ಅನೇಕ ಕಾರ್ಯಕ್ರಮಗಳಲ್ಲಿ, ಪುಸ್ತಕ ಲೋಕಾರ್ಪಣೆ ಸಮಾರಂಭಗಳಲ್ಲಿ ಬರಹಗಾರರು ನನ್ನ ಮೊದಲ ಲೇಖನ “ಶಕ್ತಿ''ಯಲ್ಲಿ ಪ್ರಕಟವಾಯಿತು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಶಕ್ತಿ ಮೂಲಕವೇ ನನ್ನ ಸಾಹಿತ್ಯಾಭಿರುಚಿ ಮುಂದುವರೆಯಿತು ಎಂದು ಲೇಖಕ ವರ್ಗ ಹೇಳಿಕೊಳ್ಳುವಾಗ ಸುದ್ದಿಯಂತೆಯೇ ಸಾಹಿತ್ಯಕ್ಕೂ ಶಕ್ತಿ ನೀಡುವ ಪ್ರಾಮುಖ್ಯತೆಯ ಅರಿವಾಗುತ್ತದೆ. ಖಂಡಿತವಾಗಿಯೂ ಇದು ಶಕ್ತಿಯ ಸಾಹಿತ್ಯ ಸಾಧನೆಯೇ ಹೌದು.
ಶಕ್ತಿಯನ್ನು ಪ್ರಬಲವಾಗಿ ಕಟ್ಟಿ ಬೆಳೆಸುವಲ್ಲಿ ಬಿ.ಎಸ್. ಗೋಪಾಲಕೃಷ್ಣ ಅವರ ಪರಿಶ್ರಮ ಮರೆಯುವಂತೆಯೇ ಇಲ್ಲ. ನಂತರದ ದಿನಗಳಲ್ಲಿ ದಿ. ಜಿ. ಯದುಮಣಿ, ದಿ. ಜಿ. ಸಂಧ್ಯಾಪ್ರಕಾಶ್ ಅವರು ಶಕ್ತಿಯನ್ನು ಶಕ್ತಿಶಾಲಿಯಾಗಿಸುವಲ್ಲಿ ನೀಡಿದ ಕೊಡುಗೆ ಖಂಡಿತಾ ಸ್ಮರಣೀಯ.
ಜಿ.ರಾಜೇಂದ್ರ ಶಕ್ತಿಯ ಸಂಪಾದಕರಾಗಿ ಗ್ರಾಮೀಣ ಸುದ್ದಿಗಳಿಗೆ ಆದ್ಯತೆ ನೀಡಿ, ಪ್ರತೀ ಗ್ರಾಮದಲ್ಲಿಯೂ ಶಕ್ತಿಯನ್ನು ಓದುಗ ಸ್ನೇಹಿಯಾಗಿಸುವಲ್ಲಿ ಸಫಲರಾದರು. ತರುವಾಯ ಬಿ.ಜಿ. ಅನಂತಶಯನ ಶಕ್ತಿಯ ಪ್ರಸಾರ ಜಾಲವನ್ನು ಪ್ರಬಲವಾಗಿಸುವಲ್ಲಿ ತನ್ನ ಕೊಡುಗೆ ನೀಡಿದರು. ಜಿ. ಚಿದ್ವಿಲಾಸ್ ಸಂಪಾದಕರಾದ ಬಳಿಕ ಹೆಚ್ಚುವರಿ ಪುಟಗಳೊಂದಿಗೆ ಸಾಹಿತ್ಯ, ಸಂಸ್ಕೃತಿಯ ಸುದ್ದಿಗಳು ವ್ಯಾಪಕತೆ ಪಡೆಯಿತು.
ಮುಂದಿನ ತಲೆಮಾರಿಗೆ ಬರಹಗಾರರನ್ನು ರೂಪಿಸಬೇಕೆಂಬ ನಿಟ್ಟಿನಲ್ಲಿ ಶಕ್ತಿಯ ಕ್ರಿಯಾಶೀಲ ಸಂಪಾದಕ ಜಿ.ಚಿದ್ವಿಲಾಸ್ ಅವರ ಪರಿಕಲ್ಪನೆಯಾದ ಮಕ್ಕಳ ಬರಹಗಳು, ಮಕ್ಕಳೇ ರಚಿಸಿದ ಚಿತ್ರಕಲೆಗಳು ಖಂಡಿತವಾಗಿಯೂ ರಾಜ್ಯಮಟ್ಟದಲ್ಲಿಯೇ ಹೊಸ ಪ್ರಯತ್ನ. ಇದರಿಂದಾಗಿ ಶಾಲೆಗಳ ವಿದ್ಯಾರ್ಥಿಗಳಲ್ಲಿಯೂ ಬರವಣಿಗೆಯ ಹವ್ಯಾಸ, ಚಿತ್ರಬಿಡಿಸುವ ಹುಮ್ಮಸ್ಸು ಕಂಡುಬAದಿದೆ. ಇದರ ಜತೆಜತೆಗೇ ಪತ್ರಿಕೆ ಓದುವ ಅಭ್ಯಾಸವೂ ಮಕ್ಕಳಲ್ಲಿ ಬೆಳೆದಿದೆ. ಪತ್ರಿಕೆಯೊಂದು ಮಾಡಬಹುದಾದ, ಮುಂದಿನ ಪೀಳಿಗೆಗೆ ಸಾಹಿತ್ಯಾಭಿರುಚಿ, ಕಲಾಭಿರುಚಿ ಮೂಡಿಸುವ ಪ್ರಯತ್ನವನ್ನು ಶಕ್ತಿ ಅತ್ಯಂತ ಸಶಕ್ತವಾಗಿ ಮೂಡಿದ್ದು ಹೆಮ್ಮೆಯ ವಿಚಾರ.
ಸಿನಿಮಾ ಬೇಡ.. ಜ್ಯೋತಿಷ್ಯದ ಗೊಡವೆ ಬೇಡವೇ ಬೇಡ !
ಅನೇಕ ವರ್ಷಗಳಿಂದ ಶಕ್ತಿಯಲ್ಲಿ ಸಿನಿಮಾ ಸುದ್ದಿಗಳಿಗೆ ಪುಟ ಅಥವಾ ಅಂಕಣ ಮೀಸಲಿಲ್ಲ ರಾಜ್ಯದ ಬೇರೆಲ್ಲಾ ಪತ್ರಿಕೆಗಳು ಸಿನಿಮಾ ಸಂಬAಧಿತ ಸುದ್ದಿಗೆ ಜಾಗ ಮೀಸಲಿಟ್ಟಿದ್ದರೆ, ಶಕ್ತಿಯಲ್ಲಿ ಮಾತ್ರ ಸಿನಿಮಾ ಸುದ್ದಿಯೇ ಇಲ್ಲ. ಕೊಡಗಿನ ಜನತೆ ಸಿನಿಮಾದಂಥ ಗ್ಲಾಮರ್ ಸುದ್ದಿಗಳನ್ನು ಅಷ್ಟಾಗಿ ಇಷ್ಟ ಪಡದೇ ಇರುವುದೂ ಇದಕ್ಕೆ ಕಾರಣ ಇರಬಹುದು. ಅಂತೆಯೇ ರಾಜ್ಯದ ಅನೇಕ ಪತ್ರಿಕೆಗಳಲ್ಲಿರುವಂತೆ ಶಕ್ತಿಯಲ್ಲಿ ದಿನಭವಿಷ್ಯ ಇಲ್ಲವೇ ಇಲ್ಲ. ಮೌಡ್ಯಾಧಾರಿತ ಸುದ್ದಿಗಳಿಗೆ ಶಕ್ತಿ ಪ್ರಾಶಸ್ತö್ಯ ನೀಡಿಲ್ಲ ಎಂಬುದೇ ಸಮಾಧಾನ.!
ಶಕ್ತಿಯಲ್ಲಿ ಸುದ್ದಿಯಾಗಲು ರಾಜಕಾರಣಿಯೇ ಮಾತನಾಡಬೇಕೆಂದಿಲ್ಲ. ಯಾವುದೋ ಪುಟ್ಟ ಗ್ರಾಮದಲ್ಲಿ ವಿಶೇಷತೆ ಇದ್ದರೆ ಸಾಕು. ಅಂಥ ಸುದ್ದಿಗಳು ಪ್ರಾಮುಖ್ಯತೆ ಗಳಿಸಿ ಹೆಡ್‌ಲೈನ್ ಆಗಿರುವಂಥ ಅನೇಕ ಉದಾಹರಣೆಗಳಿವೆ. ಇಲ್ಲಿ ಸುದ್ದಿಯಾಗುವವರು ಪ್ರಭಾವಿಯಾಗುವುದಿಲ್ಲ. ಬದಲಿಗೆ ಸುದ್ದಿಯ ವಿಷಯವೇ ಪ್ರಾಮುಖ್ಯವಾಗಿ ಅದು ಓದುಗರನ್ನು ತಲುಪುತ್ತದೆ.
ಬಹುತೇಕ ಪತ್ರಿಕೆಗಳು ಇಂದು ವರ್ಣಮಯವಾಗಿ ಪ್ರಕಟವಾಗುತ್ತಾ, ಬೆಲೆ ಹೆಚ್ಚಿಸಿಕೊಂಡು ರಂಗುರAಗಾಗಿ ಓದುಗನನ್ನು ತಲುಪುತ್ತದೆ. ಆದರೆ ಕೊಡಗಿನ ಶಕ್ತಿ ಮಾತ್ರ ೬೯ ವರ್ಷವಾದರೂ ಇಂದಿಗೂ ಕಪ್ಪು ಬಿಳುಪಿನ ಸುಂದರನೇ ಹೌದು.! ಎಷ್ಟೇ ಕಲರ್ ಹಾಕಿದರೂ ಓದುಗ ಎಂಬ ಮಹಾಪ್ರಭು, ಶಕ್ತಿಯನ್ನು ಕಲರ್‌ನಲ್ಲಿ ನೋಡಲಿಚ್ಚಿಸದೇ ಶ್ವೇತ ವರ್ಣದ ಕಾಗದಲ್ಲಿ ಕಪ್ಪು ಅಕ್ಷರಗಳಲ್ಲಿ ಶಕ್ತಿಯನ್ನು ಕಾಣಲು ಇಚ್ಚಿಸುತ್ತಿದ್ದಾನೆ ಎಂಬುದು ಅಚ್ಚರಿಯಾದರೂ ವಾಸ್ತವವಾದ ವಿಚಾರ. ! ಯಾವುದೇ ಪತ್ರಿಕೆಗೆ ಬಣ್ಣದ ಪುಟಕ್ಕಿಂತ, ಬಣ್ಣ ಬಣ್ಣದ ಸುದ್ದಿಗಳಿಗಿಂತ, ವಿಚಾರಾಧಾರಿತ ನೈಜ ಸುದ್ದಿಯೇ ಮುಖ್ಯವಾದಲ್ಲಿ ಅಂಥಲ್ಲಿ ಶಕ್ತಿ ಸೃಷ್ಟಿಯಾಗುತ್ತದೆ ಎಂದು ಧಾರಾಳವಾಗಿ ಹೇಳಬಹುದು.
ಕೊಡಗಿನ ಸಮಸ್ಯೆಗಳ ವಿಚಾರಕ್ಕೆ ಬಂದಾಗ ಶಕ್ತಿ ಸದಾ ಪತ್ರಿಕಾ ಲೋಕದಲ್ಲಿ ಹಿರಿಯಣ್ಣನ ಪಾತ್ರವನ್ನೇ ವಹಿಸಿದೆ. ಯಾರ ಪರವೂ ವಾಲದೇ, ಯಾರ ಪರವೂ ಇಷ್ಟ, ನಿಷ್ಟೆಗಳನ್ನು ತೋರದೆ ಸುದ್ದಿಯೇ ಮುಖ್ಯವಾಗಿ, ಮಾಹಿತಿಯೇ ಶಕ್ತಿಯಾಗಿ, ಸುದ್ದಿಯೇ ಗುರುವಾಗಿ ಶಕ್ತಿ ದಾಪುಗಾಲಿಟ್ಟಿದೆ. ಶಕ್ತಿಯ ಸಂಪಾದಕೀಯ ಸದಾ ಹರಿತ, ಮೊನಚು ಮತ್ತು ಗಟ್ಟಿ ಧ್ವನಿಯಿಂದ ಕೂಡಿರುವುದರಿಂದಾಗಿಯೇ ಶಕ್ತಿಯ ಸಂಪಾದಕೀಯ ಸಲಹೆಗೆ ಸದಾ ಮನ್ನಣೆ ದೊರಕುತ್ತದೆ ಎಂಬುದು ವಾಸ್ತವ. ಕೊಡಗಿಗೆ ಸಮಸ್ಯೆಯಾಗುವ ವಿಚಾರ ಎದುರಾದಾಗ ಶಕ್ತಿ ಜನರ ಪರವಾಗಿ, ಕೊಡಗಿನ ಜನತೆಯ ಧ್ವನಿಯಾಗಿ ಸಮಸ್ಯೆ ಪರಿಹಾರಕ್ಕೆ ಕಟಿಬದ್ದವಾಗಿ ಮುಂದಾಗುತ್ತದೆ. ನೊಂದವರ ಕೈಹಿಡಿದು ಸಂಕಟ ಪರಿಹಾರಕ್ಕೆ ಮುಂಚೂಣಿಯ ನೇತಾರನಾಗುತ್ತದೆ. ಹೀಗಾಗಿಯೇ ಶಕ್ತಿ ಇಂದಿಗೂ ಜನರ ಪಾಲಿಗೆ ಶಕ್ತಿಯುತ ಮಾಧ್ಯಮವಾಗಿಯೇ ಆರೂವರೆ ದಶಕಗಳಿಂದ ನಂಬಿಕೆ ಉಳಿಸಿಕೊಂಡಿದೆ. ಈ ಮೂಲಕ ಪತ್ರಿಕಾ ಮಾಧ್ಯಮವಾಗಿಯೂ ಶಕ್ತಿ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದೆ.
ನಾವೀಗ ಎಲ್ಲಾ ಯುಗಗಳನ್ನು ದಾಟಿ ಬಂದು ಜೆನ್ ಜಿ ಯುಗದಲ್ಲಿದ್ದೇವೆ. ಮುಂದೆ ಜನರೇಷನ್ ಆಲ್ಫಾ ಕೂಡ ಬರುತ್ತಿದೆ. ಚಾಟ್ ಜಿಪಿಟಿ, ಎಐ ನಂಥ ನವನವೀನ ತಂತ್ರಜ್ಞಾನಗಳು ವಿಶ್ವದಾದ್ಯಂತ ಧಾಳಿಯಿಡುತ್ತಿದೆ. ಮುದ್ರಣ ಮಾಧ್ಯಮವನ್ನೇ ಈ ಹೊಸ ತಂತ್ರಜ್ಞಾನ ಬೆದರಿಸುತ್ತಿದೆ. ಅಣಕಿಸುತ್ತಿದೆ. ಹೀಗಿದ್ದರೂ ಇಂಥ ಸೋಶಿಯಲ್ ಮೀಡಿಯಾ, ಡಿಜಿಟಲ್ ಮೀಡಿಯಾದಿಂದ ಶಕ್ತಿಗೆ ಹೆಚ್ಚಿನ ಸಮಸ್ಯೆಯಾಗಲಾರದು ಯಾಕೆಂದರೆ, ಶಕ್ತಿ ಓದುವಿಕೆಯಿಂದಲೇ ದಿನ ಪ್ರಾರಂಭವಾಗುವ ಸಂಸ್ಕೃತಿ ಕೊಡಗಿನ ಬಹುತೇಕ ಮನೆಗಳಲ್ಲಿ ಹಾಸುಹೊಕ್ಕಾಗಿರುವಾಗ ಇಂಥ ಮಕ್ಕಳು, ಎಂಥ ಡಿಜಿಟಲ್ ಮಾಧ್ಯಮವೇ ಬರಲಿ, ಶಕ್ತಿಯನ್ನು ಬಿಟ್ಟುಕೊಡಲಾರರು ಎಂಬ ಪ್ರಬಲ ನಂಬಿಕೆ ಖಂಡಿತಾ ಇದೆ. ಹೀಗಿರುವಾಗ ಶಕ್ತಿಗೆ ೬೯ ಆದರೂ ಸುದ್ದಿಯ ಸಂಭ್ರಮ ಹಂಚಿಕೊಳ್ಳುವ ವಿಚಾರದಲ್ಲಿ ಶಕ್ತಿಗೆ ಇಂದಿಗೂ ಹರೆಯ! ಅರವತ್ತೊಂಬತ್ತು ವರ್ಷ - ಪ್ರತೀಯೋರ್ವರ ಜೀವನದಲ್ಲಿಯೂ ಸಂಧ್ಯಾಕಾಲ ಪ್ರವೇಶಿಸುವ ಹಂತ. ಆರು ಮುಕ್ಕಾಲು ದಶಕಗಳ ಜೀವನ ನಿತ್ರಾಣದಿಂದಾಗಿ ವಿಶ್ರಾಂತಿ ಬಯಸುವ ಹೊತ್ತು.
ಆದರೆ, ಶಕ್ತಿಯ ಪಾಲಿಗೆ ಏಳು ದಶಕ ಎಂಬುದು ಒಂದು ಸಶಕ್ತ ಅನುಭವ.. ಒಂದು ಮರ ವರ್ಷದಿಂದ ವರ್ಷಕ್ಕೆ ಹೆಮ್ಮರವಾಗಿ ಬೆಳೆದು ಅದರ ಟಿಸಿಲುಗಳು ಹೇಗೆ ಮತ್ತಷ್ಟು ಜನರಿಗೆ ತಂಪು ನೀಡುತ್ತದೆಯೋ ಅಂತೆಯೇ ಶಕ್ತಿ ಕೂಡ ಈ ಆರು ಮುಕ್ಕಾಲು ದಶಕಗಳಲ್ಲಿ ನೂರಾರು ಪತ್ರಕರ್ತರ ಗರಡಿಮನೆಯಾಗಿ, ಲಕ್ಷಾಂತರ ಓದುಗರನ್ನು ಸಾವಿರಾರು ಮನೆಗಳಲ್ಲಿ ಗಳಿಸಿಕೊಂಡು ಮತ್ತಷ್ಟು ಗಟ್ಟಿತನದಿಂದ, ಪ್ರಭಾವಶಾಲಿಯಾಗಿ ಮುನ್ನಡೆಯುತ್ತಿದೆ. ಹಿರಿಯರಂತೆ ಕಿರಿಯರನ್ನೂ ತನ್ನ ತೆಕ್ಕೆಗೆ ಸೆಳೆದುಕೊಂಡು ಶಕ್ತಿಯ ಶಕ್ತಿ ಮತ್ತಷ್ಟು ಹೆಚ್ಚಾಗುತ್ತಿದೆ. ಅನುಭವದ ಹಿರಿತನದೊಂದಿಗೆ, ಪತ್ರಿಕಾಲೋಕದ ಭೀಷ್ಮನಾಗಿಯೇ ಶಕ್ತಿ ಮುಂದಡಿಯಿಡುತ್ತಾ ಇದು ನಮ್ಮ ಪತ್ರಿಕೆ, ಇದು ನಮ್ಮ ಶಕ್ತಿ ಎಂಬ ಛಾಪನ್ನು ಮನೆಮನೆಯಲ್ಲಿಯೂ ಮನಮನದಲ್ಲಿಯೂ ಮೂಡಿಸಿದೆ.
ಕೊಡಗಿನಲ್ಲಿ ಬೆಳಗ್ಗೆ ಎಂಬುದು ಶಕ್ತಿಯಿಂದಲೇ ಪ್ರಾರಂಭವಾಗುತ್ತದೆ. ಶಕ್ತಿಯನ್ನು ಕೈಯಲ್ಲಿ ಹಿಡಿದುಕೊಂಡು ಕಾಫಿ ಹೀರಿದರೆ ಸಿಗುವ ಸಮಾಧಾನ ಬೇರೆಲ್ಲಾ ಸಿಗಲಾರದು ಎಂಬ ಭಾವನೆ. ಒಬ್ಬಿಬ್ಬರದ್ದಲ. ಇಡೀ ಜಿಲ್ಲೆಯ ಓದುಗರದ್ದು ಎಂದರೆ ಉತ್ಪೇಕ್ಷೆಯಲ್ಲ.! ಶಕ್ತಿ ಎಂಬ ಪತ್ರಿಕೆ ಕೇವಲ ಹಾಳೆಗಳಲ್ಲ. ಕೇವಲ ಪುಟಗಳು ಮಾತ್ರವೇ ಅಲ್ಲ. ಅದು ಕಾಗದದ ರೂಪದಲ್ಲಿ ಮನಸ್ಸಿನ ನೆಮ್ಮದಿಗೆ, ಮನಸ್ಸಿನ ಶಾಂತತೆಗೆ, ಮನಸ್ಸಿನ ಸಮಾಧಾನಕ್ಕೆ ಬೂಸ್ಟರ್ ಡೋಸ್ ಇದ್ದಂತೆ!
ಶಕ್ತಿಯ ಓದು ಎಂದರೆ.. ಕಾಗದದ ಮೇಲಿನ ಅಕ್ಷರದ ಓದಲ್ಲ. ಅದು ಅಕ್ಷರಗಳ ಜತೆಗಿನ ಪ್ರೇಮ, ಅಕ್ಷರಗಳ ಜತೆಗಿನ ಬಾಂಧವ್ಯ. ಅಕ್ಷರಗಳ ಜತೆಗಿನ ಒಡನಾಟ. ಹೀಗಾಗಿಯೇ ಶಕ್ತಿ ಮನಮನದ ಶಕ್ತಿಯಾಗಿದೆ. ಮನೆಮನೆಯ ಜ್ಞಾನದ ಶಕ್ತಿಯಾಗಿ ಕಂಗೊಳಿಸಿದೆ.