ಕಣಿವೆ, ಮಾ. ೩: ಗ್ರಾಮೀಣ ಪ್ರದೇಶಗಳ ಕೆರೆಗಳು ಅಭಿವೃದ್ಧಿಗೊಂಡು ಮಳೆಯ ನೀರು, ಸಮೃದ್ಧವಾಗಿ ಕೆರೆಯಲ್ಲಿ ನಿಲುಗಡೆಗೊಂಡು ರೈತರಿಗೆ, ಪ್ರಾಣಿಪಕ್ಷಿಗಳಿಗೆ ನೆರವಾದರೆ ಅದು ಗ್ರಾಮೀಣ ಅಭಿವೃದ್ಧಿಯ ತಳಹದಿ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು.
೧.೬೦ ಕೋಟಿ ರೂಗಳ ವೆಚ್ಚದಲ್ಲಿ ಮಂಗಳವಾರ ಗೊಂದಿಬಸವನಹಳ್ಳಿ ಗ್ರಾಮದ ರೊಂಡೆಕೆರೆಯ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆಗಳ ಜೊತೆಗೆ ಮಡಿಕೇರಿ ಕ್ಷೇತ್ರಕ್ಕೆ ಕೆರೆಗಳ ಅಭಿವೃದ್ಧಿಗೂ ಪೂರಕವಾದ ಅನುದಾನಗಳನ್ನು ನೀಡುತ್ತಿದೆ.
ರೊಂಡೆಕೆರೆಯಲ್ಲಿ ಮಳೆಗಾಲದಲ್ಲಿ ಅತ್ಯಧಿಕ ಮಳೆಯ ನೀರು ಹರಿದ ಸಂದರ್ಭ ಕೆರೆಯ ಏರಿ ಒಡೆದು ನೀರೆಲ್ಲಾ ಪೋಲಾಗಿತ್ತು. ಮೀನು ಸಾಕಣೆಗೂ ಅಡಚಣೆಯಾಗಿತ್ತು. ಇದನ್ನು ಮನಗಂಡು ಉಸ್ತುವಾರಿ ಸಚಿವರ ಗಮನ ಸೆಳೆದು ೧.೬೦ ಲಕ್ಷ ರೂಗಳ ಅನುದಾನ ತಂದು ಕೆರೆಯ ಏರಿ, ತೂಬು ಹಾಗೂ ರಸ್ತೆಯ ಅಭಿವೃದ್ದಿಗೆ ಮುಂದಾಗಲಾಗಿದೆ ಎಂದರು.
ಕುಶಾಲನಗರದ ತಾವರೆಕೆರೆಯನ್ನು ರೂ.೩ ಕೋಟಿ ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದ್ದು ಸದ್ಯದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕರು ಹೇಳಿದರು. ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಗೋವಿಂದಪ್ಪ, ಜಲಮಂಡಳಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಕುಡಾ ಮಾಜಿ ಅಧ್ಯಕ್ಷ ಬಿ.ಜಿ. ಮಂಜುನಾಥ್, ಪುರಸಭೆ ನಾಮನಿರ್ದೇಶನ ಸದಸ್ಯರಾದ ಗೊಂದಿಬಸವನಹಳ್ಳಿ ಪ್ರಕಾಶ್, ಜಗದೀಶ್, ತಹಶೀಲ್ದಾರ್ ಕಿರಣ್ ಗೌರಯ್ಯ, ಪುರಸಭೆ ಮುಖ್ಯಾಧಿಕಾರಿ ಗಿರೀಶ್ ಕುಮಾರ್, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಈ ಸಂದರ್ಭ ಇದ್ದರು.