ಮಡಿಕೇರಿ, ಮಾ.೩: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯಿಂದ ೨೦೨೫ ನೇ ಸಾಲಿನ ಗೌರವ ಪ್ರಶಸ್ತಿ ಪ್ರಕಟಿಸಲಾಗಿದೆ. ತಾ. ೧೪ ರಂದು ಮಂಗಳೂರಿನ ಊರ್ವ ಸ್ಟೋರ್ ಸಮೀಪದಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ೫೦ ಸಾವಿರ ರೂ.ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಅನಂತರಾಜ ಗೌಡ (ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರ), ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲೋಕೇಶ್ವರಿ ವಿನಯ ಚಂದ್ರ (ಅರೆಭಾಷಿಕ ಸಂಘಟನಾ ಕ್ಷೇತ್ರ) ಮತ್ತು ಕೊಡಗು ಜಿಲ್ಲೆ ಮಡಿಕೇರಿಯ ಕಟ್ರತನ ಲಲಿತ ಅಯ್ಯಣ್ಣ (ಅರೆಭಾ಼ಷೆ ಸಾಹಿತ್ಯ ಕ್ಷೇತ್ರ) ಇವರುಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ತಾ. ೧೪ ರಂದು ನಡೆಯುವ ಸಮಾರಂಭದಲ್ಲಿ ಅಕಾಡೆಮಿ ಪ್ರಕಟಿತ ಪುಸ್ತಕಗಳ ಬಿಡುಗಡೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲಾವಿದರಿಗೆ ವಾದ್ಯ ಪರಿಕರಗಳ ವಿತರಣೆ ಹಾಗೂ ಅರೆಭಾಷೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ತಿಳಿಸಿದ್ದಾರೆ.