ಸುಂಟಿಕೊಪ್ಪ, ಮಾ. ೨: ಕೃಷಿ ಪರಂಪರೆಯನ್ನು ಹೊಂದಿರುವ ಭಾರತ ದೇಶದ ನೆಲವನ್ನು ತಾಯಿಯೆಂದು ನಂಬಿ ಸಂಸ್ಕೃತಿ ಸರಂಕ್ಷಣೆ ಹಿಂದೂಗಳು ಒಗ್ಗಟ್ಟಾಗಿರುವುದರಿಂದ ಭಾರತ ದೇಶ ಬಲಿಷ್ಠ ಶಕ್ತಿಯಾಗಿ ರೂಪುಗೊಂಡಿದೆ ಎಂದು ಸುಳ್ಯದ ನವೀನ್ ಸುಬ್ರಮಣ್ಯ ಹೇಳಿದರು.

ಐಗೂರು ಮಂಡಲದ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದ ಅವರು, ಭಾರತ ದೇಶದ ಮೇಲೆ ವಿದೇಶಿಗರು ಆಕ್ರಮಣ ನಡೆಸಿ ದೇವಾಲಯಗಳನ್ನು ಧ್ವಂಸಗೊಳಿಸಿ, ಸಂಪತ್ತು ಕದ್ದೊಯ್ಯುತ್ತಿದ್ದರು. ಇವೆಲ್ಲದರ ನಡುವೆ ಭಾರತೀಯರು ಭಾರತದ ಪುನರ್ ನಿರ್ಮಾಣ ಸಂಸ್ಕೃತಿ ಪರಂಪರೆ ಕೌಟುಂಬಿಕ ಮೌಲ್ಯಗಳನ್ನು ಉಳಿಸಿಕೊಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ಸಮಾಜದ ಒಳಗಿನ ಕೊರತೆಯನ್ನು ನೀಗಿಸಿ ಆಯಾ ಕಾಲಘಟ್ಟದಲ್ಲಿ ಶಿವಾಜಿ ಮಹಾರಾಜರು, ಶ್ರೀ ನಾರಾಯಣ ಗುರುಗಳು ಈ ನೆಲದ ಸಂಸ್ಕೃತಿ ಪರಂಪರೆಯನ್ನು ಉಳಿಸಿದ್ದಾರೆ. ಹಿಂದೂಗಳಲ್ಲಿನ ಜಾತಿ ವ್ಯವಸ್ಥೆ ಕೀಳು-ಮೇಲು ಭಾವನೆಯನ್ನು ತೊರೆದು ಎಲ್ಲರೂ ಒಗ್ಗಟ್ಟಾಗಿ ಕೌಟುಂಬಿಕ ಮೌಲ್ಯಗಳನ್ನು ಕಟ್ಟಿಕೊಂಡು ಬದುಕಿದರೆ ಭಾರತ ದೇಶ ಇನ್ನಷ್ಟು ಸದೃಢವಾಗಲಿದೆ ಎಂದರು.

ಅರಕಲಗೋಡು ಬಸವಾಪಟ್ಟಣ ತೋಟಂದಾರ್ಯ ಮಠದ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮೀಜಿ ಮಾತನಾಡಿ, ಸನಾತನ ಪರಂಪರೆ ಉಳಿವಿಗಾಗಿ ಭಾರತ ಅಸ್ತಿತ್ವ ಕಾಪಾಡಲು ಹಿಂದೂ ಸಂಸ್ಕೃತಿ, ಆಚಾರ-ವಿಚಾರ ಉಳಿಸಲು ೧೦೦ ವರ್ಷಗಳ ಹಿಂದೆ ಸ್ಥಾಪನೆಯಾದ ಆರ್‌ಎಸ್‌ಎಸ್ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಮಕ್ಕಳಿಗೆ ಕೌಟಂಬಿಕ ಮೌಲ್ಯಗಳು, ಧರ್ಮ ನಿಷ್ಠೆ, ಸಂಸ್ಕಾರಗಳನ್ನು ಬಾಲ್ಯದಿಂದಲೇ ಕಲಿಸಿಕೊಡಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸೈನಿಕ ಎಂ.ಎಸ್. ಕಾಳಪ್ಪ, ಧರ್ಮ ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಿದರು. ಕಾರ್ಯಕ್ರಮಕ್ಕೂ ಮುನ್ನ ವಾಹನ ಜಾಥಾ, ಟ್ಯೂಬ್ಲೋಗಳ ಮೆರವಣಿಗೆ ನಡೆಯಿತು. ಮಹಿಳೆಯರು ಪೂರ್ಣಕುಂಭ ಕಳಸದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.