ಮಡಿಕೇರಿ, ಫೆ. ೨: ಕೆ. ನಿಡುಗಣೆಯಲ್ಲಿ ನೂತನ ಗ್ರಾಮ ಪಂಚಾಯಿತಿ ಕಚೇರಿ ನಿರ್ಮಾಣಕ್ಕೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ನಿರ್ದೇಶನ ನೀಡಿದ್ದಾರೆ.

ಕೆ. ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಮೊಟ್ಟೆ ಜಹಂಗೀರ್ ಪರಿಶಿಷ್ಟ ಜಾತಿ ಕಾಲೋನಿ ಜನರ ಮನೆಗೆ ಹೋಗುವ ೧೦ ಲಕ್ಷ ರೂಪಾಯಿಗಳ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೆ. ನಿಡುಗಣೆ ಪಂಚಾಯಿತಿ ಸುಮಾರು ರೂ. ೨.೫ ಕೋಟಿ ವಾರ್ಷಿಕ ಆದಾಯ ಗಳಿಸುತ್ತಿದ್ದು, ಸುಸಜ್ಜಿತ ಸ್ವಂತ ಕಟ್ಟಡ ಹೊಂದದೆ ಇರುವುದು ವಿಷಾದನೀಯ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಸ್ಥಳ ಗುರುತಿಸಿ ಕೂಡಲೇ ಕಟ್ಟಡ ನಿರ್ಮಾಣಕ್ಕೆ ಕಾರ್ಯಸೂಚಿ ತಯಾರಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಅವರಿಗೆ ಸೂಚನೆ ನೀಡುವುದರ ಜೊತೆಗೆ ತಮ್ಮ ಶಾಸಕರ ಅನುದಾನದಲ್ಲಿ ಹಣ ಒದಗಿಸುತ್ತಿದ್ದು, ಪಂಚಾಯಿತಿ ಸಂಪನ್ಮೂಲಗಳನ್ನು ಬಳಕೆ ಮಾಡುವಂತೆ ಸೂಚಿಸಿದರು. ಈ ಸಂದÀರ್ಭ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ, ಕೆ. ನಿಡುಗಣೆ ಪಂಚಾಯಿತಿ ಮಾಜಿ ಸದಸ್ಯ ಕೊಕ್ಕಲೆರ ಅಯ್ಯಪ್ಪ, ಜಾನ್ಸನ್ ಪಿಂಟೋ, ರಘು, ಪ್ರಮುಖರಾದ ವಿ.ಜಿ. ಮೋಹನ್, ಕೋಚನ ಹರಿಪ್ರಸಾದ್, ಮುದ್ದುರಾಜ್, ಕವನ್ ಕೊತ್ತೋಳಿ, ಅರ್ಜುನ್, ಶರಣ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಗ್ರಾಮಸ್ಥರ ಪರವಾಗಿ ಡಾ. ಮಂತರ್ ಗೌಡ ಅವರನ್ನು ಸನ್ಮಾನಿಸಲಾಯಿತು.