ಸೋಮವಾರಪೇಟೆ, ಫೆ. ೨೭: ರೂ. ೫೦ ಲಕ್ಷ ವೆಚ್ಚದಲ್ಲಿ ಪೂರ್ಣಗೊಂಡ ಬಸವನಕಟ್ಟೆ-ಶಾಂತಳ್ಳಿ ಮುಖ್ಯರಸ್ತೆ ಸಂಚಾರಕ್ಕೆ ಮುಕ್ತಗೊಂಡಿದೆ. ಕಳೆದ ೨೦ ದಿನಗಳ ಹಿಂದೆ ಕಾಮಗಾರಿ ಆರಂಭಗೊAಡು ಸಂಚಾರಕ್ಕೆ ತಡೆಯಾಗಿದ್ದ ಈ ರಸ್ತೆಯನ್ನು ಗುತ್ತಿಗೆದಾರ, ಅರಕಲಗೂಡಿನ ಮಂಜು ಅವರು ನಿಗದಿತ ಸಮಯಕ್ಕೆ ಮುಂಚಿತವಾಗಿ ಪೂರ್ಣಗೊಳಿಸಿದ್ದು, ಇದೀಗ ಎಲ್ಲಾ ಮಾದರಿಯ ವಾಹನಗಳ ಸಂಚಾರಕ್ಕೆ ಕಾಂಕ್ರೀಟ್ ರಸ್ತೆ ಮುಕ್ತವಾಗಿದೆ.
ಸೋಮವಾರಪೇಟೆ-ಶಾಂತಳ್ಳಿ ರಾಜ್ಯ ಹೆದ್ದಾರಿಯ ಬಸವನಕಟ್ಟೆ ಗ್ರಾಮದ ಬಳಿ ಪ್ರತೀ ಮಳೆಗಾಲದಲ್ಲಿ ರಸ್ತೆ ಗುಂಡಿ ಬಿದ್ದು, ಡಾಂಬರು ಕಿತ್ತುಬರುತ್ತಿತ್ತು. ಈ ನಿಟ್ಟಿನಲ್ಲಿ ಕಾಂಕ್ರೀಟ್ ರಸ್ತೆಯ ಅಗತ್ಯತೆಯ ಬಗ್ಗೆ ಸ್ಥಳೀಯರು, ಶಾಸಕ ಡಾ. ಮಂತರ್ ಗೌಡ ಅವರಿಗೆ ಮನವರಿಕೆ ಮಾಡಿದ್ದರು.
ಅದರಂತೆ ೨೭೦ ಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಶಾಸಕರು ರೂ. ೫೦ ಲಕ್ಷ ಅನುದಾನ ಒದಗಿಸಿ, ಭೂಮಿಪೂಜೆ ನೆರವೇರಿಸಿದ್ದರು. ಗುತ್ತಿಗೆದಾರ ಮಂಜು ಅವರು ನಿಗದಿತ ಸಮಯಕ್ಕೂ ಮುನ್ನವೇ ಕಾಮಗಾರಿಯನ್ನು ಪೂರ್ಣಗೊಳಿಸಿದ್ದು, ಸ್ಥಳೀಯ ಪ್ರಮುಖರು ರಸ್ತೆಯನ್ನು ಉದ್ಘಾಟಿಸುವ ಮೂಲಕ ಸಂಚಾರಕ್ಕೆ ಮುಕ್ತಗೊಳಿಸಿದರು.
ಬಸವನಕಟ್ಟೆಯ ಬಳಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಸಂಚಾರವನ್ನು ಬಂದ್ ಮಾಡಿದ್ದರಿಂದ ಶಾಂತಳ್ಳಿ ಮಾರ್ಗವಾಗಿ ಬೆಟ್ಟದಳ್ಳಿ, ಹರಗ, ಮಲ್ಲಳ್ಳಿ, ಕೂಡುರಸ್ತೆ, ಪಟ್ಲ, ಸುಬ್ರಹ್ಮಣ್ಯ, ಸಕಲೇಶಪುರಕ್ಕೆ ತೆರಳುವ ವಾಹನಗಳು ಯಡೂರು ಮಾವಿನಕಟ್ಟೆ ಮಾರ್ಗವಾಗಿ ತಲ್ತರೆಶೆಟ್ಟಳ್ಳಿ, ಗೌರಿಕೆರೆ ಮೂಲಕ ಬಳಸು ದಾರಿಯಲ್ಲಿ ತೆರಳಬೇಕಿತ್ತು. ಇದೀಗ ರಸ್ತೆಯು ಸಂಚಾರಕ್ಕೆ ಮುಕ್ತವಾಗಿದ್ದು, ಈ ಹಿಂದಿನAತೆಯೇ ವಾಹನಗಳು ಸಾಗಲು ಅನುವು ಮಾಡಿಕೊಡಲಾಗಿದೆ.
ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದ ತಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್ ಅವರು, ಶಾಸಕ ಡಾ. ಮಂತರ್ ಗೌಡ ಅವರು ರಸ್ತೆ ನಿರ್ಮಾಣಕ್ಕೆ ಅನುದಾನ ಒದಗಿಸುವ ಮೂಲಕ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿದ್ದಾರೆ. ಕ್ಷೇತ್ರದಾದ್ಯಂತ ಕೋಟ್ಯಂತರ ರೂಪಾಯಿ ಅನುದಾನದಡಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಶಾಂತಳ್ಳಿ, ಬೆಟ್ಟದಳ್ಳಿ ಭಾಗದಂತಹ ಗ್ರಾಮಗಳಿಗೂ ಲಕ್ಷಾಂತರ ರೂಪಾಯಿ ಅನುದಾನ ಒದಗಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳ ಯಶಸ್ವಿ ಅನುಷ್ಠಾನದೊಂದಿಗೆ ಅಭಿವೃದ್ಧಿಗೂ ಅನುದಾನ ಒದಗಿಸುತ್ತಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ವಿರೋಧ ಪಕ್ಷದ ಮುಖಂಡರು ಅನಗತ್ಯ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ಶಾಸಕ ಮಂತರ್ ಗೌಡ ಅವರು ಅಭಿವೃದ್ಧಿಯ ಮೂಲಕವೇ ಉತ್ತರ ನೀಡುತ್ತಿದ್ದಾರೆ. ಕೂಡುರಸ್ತೆಯಿಂದ ಆಲೇಕಟ್ಟೆ ರಸ್ತೆಯವರೆಗೆ ರಸ್ತೆ ನಿರ್ಮಾಣ ಕಾರ್ಯ ಆರಂಭಗೊAಡಿದೆ. ಪಟ್ಲ, ಮಾಗೇರಿ ರಸ್ತೆ ರೂ. ೧ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಣುತ್ತಿದೆ ಎಂದರು.
ಈ ಸಂದರ್ಭ ಗ್ರಾಮಾಧ್ಯಕ್ಷ ಬಸವರಾಜು, ಗ್ರಾ.ಪಂ. ಸದಸ್ಯ ಚಂಗಪ್ಪ, ಪ್ರಮುಖರಾದ ಮಧುಕುಮಾರ್, ಲಿಖಿತ್, ಪ್ರತಾಪ್, ವಿನೋದ್, ಮುತ್ತಣ್ಣ, ಸುಬ್ಬಯ್ಯ, ಪ್ರಕಾಶ್ ಸೇರಿದಂತೆ ಇತರರು ಇದ್ದರು.