ಸಿದ್ದಾಪುರ, ಫೆ. ೨೭: ಸ್ಕೂಟಿ ಡಿಕ್ಕಿಯಿಂದ ರಸ್ತೆಗೆ ಬಿದ್ದ ಪಾದಚಾರಿ ಮೇಲೆ ಕಾರಿನ ಚಕ್ರ ಹರಿದು ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ಸಿದ್ದಾಪುರ ಸಮೀಪದ ಆನಂದಪುರದಲ್ಲಿ ಸಂಭವಿಸಿದೆ
ಆನಂದಪುರ ನಿವಾಸಿ ಏನೋಸ್ ಮನೋಹರ್ (೪೩) ಮೃತ ದುರ್ದೈವಿ. ನೆಲ್ಯಹುದಿಕೇರಿಯ ನಿವಾಸಿ ಹಂಸ ಎಂಬಾತ ಅಮ್ಮತ್ತಿಯಿಂದ ನೆಲ್ಯಹುದಿಕೇರಿ ಕಡೆಗೆ ಸ್ಕೂಟಿಯಲ್ಲಿ ತೆರಳುತ್ತಿರುವ ಸಂದÀರ್ಭ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ತೆರಳುತ್ತಿದ್ದ ಮನೋಹರ್‌ಗೆ ಸ್ಕೂಟಿ ಡಿಕ್ಕಿ ಹೊಡೆದಿದೆ. ಪರಿಣಾಮ ಪಾದಚಾರಿ ಮಗುಚಿ ರಸ್ತೆಗೆ ಬಿದ್ದಿದ್ದು, ಸ್ಕೂಟಿ ಚಾಲಕ ಕೂಡ ರಸ್ತೆ ಬದಿಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಈ ವೇಳೆ ಅಮ್ಮತ್ತಿಯಿಂದ ಬಂದ ಕಾರು ರಸ್ತೆಗೆ ಬಿದ್ದ ಪಾದಚಾರಿ ಏನೋಸ್ ಮನೋಹರ್ ಮೇಲೆ ಹತ್ತಿದೆ. ಗಂಭೀರ ಗಾಯಗೊಂಡ ಪಾದಚಾರಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸ್ಕೂಟಿ ಚಾಲಕ ಕೂಡ ಗಂಭೀರ ಗಾಯಗೊಂಡಿದ್ದು ಮಂಗಳೂರಿಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಅಪಘಾತಪಡಿಸಿದ ವಾಹನದ ಪತ್ತೆಗೆ ಬಲೆಬೀಸಿದ್ದಾರೆ.