ಮಡಿಕೇರಿ, ಫೆ. ೨೫: ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಮಕ್ಕಳ ಸಂತೆ ನಡೆಯಿತು.
ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ, ಸರ್ಕಾರಿ ಪಿ.ಎಂ.ಶ್ರೀ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ನಡೆದ ಮಕ್ಕಳ ಸಂತೆಯಲ್ಲಿ ಸುಮಾರು ೭೦ ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ಗಮನ ಸೆಳೆದರು. ಗಣಿಕೆ ಸೊಪ್ಪು, ನೊಗ್ಗೆ, ಕೊತ್ತಂಬರಿ, ಕರಿಬೇವು, ಬಸಳೆ, ಪಾಲಕ್ ಸೊಪ್ಪು, ಟೊಮೆಟೋ, ಕೆಸ, ಹಲಸು, ಬಾಳೆಕಾಯಿ, ಬಾಳೆಹಣ್ಣು, ಸಪೋಟ, ಕಿತ್ತಳೆ, ಚಕ್ಕೊತ, ಮೂಲಂಗಿ, ನಿಂಬೆಹಣ್ಣು, ಸಿಹಿಗೆಣಸು, ಕಲ್ಲಂಗಡಿ, ಬದನೆ, ಪರಂಗಿ ಹಣ್ಣು, ಆಲೂಗಡ್ಡೆ, ಈರುಳ್ಳಿ, ಸೌತೆಕಾಯಿ, ಜತೆಗೆ ಮಹಿಳೆಯರ ಸೀರೆ ಒಳಗೊಂಡAತೆ ಫ್ಯಾನ್ಸಿ ವಸ್ತುಗಳು ಹಲವು ವಿಭಾಗದಲ್ಲಿ ಮಕ್ಕಳ ಸಂತೆ ಏರ್ಪಡಿಸಿದ್ದು, ವಿಶೇಷ ಆಕರ್ಷಣೀಯವಾಗಿತ್ತು. ಪೋಷಕರು, ವಿದ್ಯಾರ್ಥಿಗಳು ಭರ್ಜರಿ ವಹಿವಾಟು ನಡೆಸಿದರು.
ಪಿ.ಎಂ.ಶ್ರೀ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಇದೇ ಮೊದಲ ಬಾರಿಗೆ ಶಾಲೆ ಆವರಣದಲ್ಲಿ ಮಕ್ಕಳ ಸಂತೆ ನಡೆಸಿದ್ದು, ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ವಿದ್ಯಾರ್ಥಿಗಳ ಆರ್ಥಿಕ ಸಾಕ್ಷರತಾ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಮಕ್ಕಳ ಸಂತೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಮಕ್ಕಳಲ್ಲಿ ಆರ್ಥಿಕ, ವಾಣಿಜ್ಯ, ವ್ಯಾಪಾರದ ಮಹತ್ವ ಅರಿವು ಮೂಡಿಸುವಲ್ಲಿ ಮಕ್ಕಳ ಸಂತೆ ಸಹಕಾರಿಯಾಗಿದೆ. ಆ ನಿಟ್ಟಿನಲ್ಲಿ ಪ್ರತಿನಿತ್ಯ ಕುಟುಂಬಕ್ಕೆ ಬೇಕಿರುವ ಪದಾರ್ಥಗಳನ್ನು ಕೊಳ್ಳುವಲ್ಲಿ ಹಣದ ಉಳಿತಾಯ ಯೋಜನೆ ಬಗ್ಗೆ ಮಕ್ಕಳ ಸಂತೆ ಉತ್ಸಾಹದಾಯಕವಾಗಿದೆ ಎಂದು ಅವರು ಹೇಳಿದರು. ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಸೌಮ್ಯ ಪೊನ್ನಪ್ಪ, ವಿಷಯ ಪರಿವೀಕ್ಷಕಿ ಬಿಂದು, ಶರ್ಮಿಳಾ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶಶಿಕಲಾ, ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಎಚ್.ಟಿ. ಭವಾನಿ, ಎಸ್ಡಿಎಂ.ಸಿ ಅಧ್ಯಕ್ಷ ಜಗದೀಶ್, ಶಿಕ್ಷಕರಾದ ಜಯಮ್ಮ, ಮೋಹನ್ ಕುಮಾರಿ, ಶೃತಿ, ಕವಿತಾ, ಸಂದೇಶ್, ಮಮತ, ಹಾಜಿರಾ ಬೇಗಂ, ಸಿ.ಸಿ. ಮ್ಯಾಥ್ಯೂ, ಶೃತಿಶ್ರೀ, ಮಂಜುಳ ಇತರರು ಇದ್ದರು.