*ಗೋಣಿಕೊಪ್ಪ, ಫೆ. ೨೫: ರಾಜ್ಯದ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯಲ್ಲಿ ಹಿನ್ನಡೆಯನ್ನು ಹೊಂದಿದ್ದು, ಪ್ರಚಾರದಲ್ಲಿ ಮುನ್ನಡೆ ಗಳಿಸಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಕಾಂಗ್ರೆಸ್ ಸರ್ಕಾರದ ಆಡಳಿತದ ಬಗ್ಗೆ ಲೇವಡಿ ಮಾಡಿದರು.

ಗೋಣಿಕೊಪ್ಪ ದುರ್ಗಾಬೋಜಿ ಸಭಾಂಗಣದಲ್ಲಿ ನಡೆದ ವೀರಾಜಪೇಟೆ ಮಂಡಲ ಸಂಘಟನಾತ್ಮಕ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ೨೦ ವರ್ಷಗಳ ಬಿಜೆಪಿ ಆಡಳಿತದಲ್ಲಿ ಕೊಡಗು ಅಭಿವೃದ್ಧಿಯಲ್ಲಿ ಸಮೃದ್ಧಿಯನ್ನು ಕಂಡಿದೆ. ಗ್ರಾಮೀಣ ಪ್ರದೇಶದ ಕಾಲೋನಿಗಳಿಗೆ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಿಕೊಡಲಾಗಿದೆ. ಇಂದು ಶಾಸಕರು ಓಡಾಡುವ ಗ್ರಾಮೀಣ ಭಾಗಗಳ ರಸ್ತೆಗಳನ್ನು ಬಿಜೆಪಿ ಅವಧಿಯಲ್ಲಿ ನಿರ್ಮಿಸಿದ್ದಾಗಿದೆ. ಶೇ.೯೦ ರಷ್ಟು ಭಾಗ ರಸ್ತೆ ಅಭಿವೃದ್ಧಿ ಕಂಡಿದೆ. ಉಳಿದ ಶೇ.೧೦ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತಿರುವ ಕಾಂಗ್ರೆಸ್ಸಿನ ಶಾಸಕರು ಪ್ರಚಾರದ ಅಬ್ಬರದಲ್ಲಿ ತೇಲುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರದ ವೈಫಲ್ಯ ಆಡಳಿತವನ್ನು ಜನರೆÀಡೆಗೆ ತಲುಪಿಸುವ ಕಾರ್ಯ ಬಿಜೆಪಿ ಕಾರ್ಯಕರ್ತರು ನಿಷ್ಠೆಯಿಂದ ನಿರ್ವಹಿಸಬೇಕಾಗಿದೆ. ಬಿಜೆಪಿ ಸರ್ಕಾರವಿದ್ದಾಗ ಅಭಿವೃದ್ಧಿಯೇ ನಡೆದಿಲ್ಲ ಎಂಬ ವಿನಾಕಾರಣ ಆರೋಪವನ್ನು ಕಾಂಗ್ರೆಸ್ ಸರ್ಕಾರ ಹೆಗಲೇರಿಸಿಕೊಂಡು ನಡೆಯುತ್ತಿದೆ. ಇದು ಶುದ್ಧ ಸುಳ್ಳಿನ ಪ್ರಚಾರ ಎಂಬುದು ಪ್ರಜ್ಞಾವಂತ ಜನರಿಗೆ ಅರಿವಿಕೆ ಇದೆ ಎಂದು ಹೇಳಿದರು.

ಬಿಜೆಪಿ ಸರ್ಕಾರ ನಡೆಸಿದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪೂರ್ಣ ಮಾಹಿತಿ ಇದೆ. ಈ ವಿಚಾರವಾಗಿ ಬಹಿರಂಗ ಚರ್ಚೆಗೆ ಕಾಂಗ್ರೆಸ್ ಪಕ್ಷದ ನಾಯಕರನ್ನು ಮತ್ತು ಶಾಸಕರನ್ನು ಬಿಜೆಪಿ ಆಹ್ವಾನಿಸುತ್ತಿದೆ. ಸತ್ಯಾಸತ್ಯತೆಯನ್ನು ಜನರ ಮುಂದಿಡಬಹುದು ಎಂದು ಸವಾಲೆಸೆದರು. ಈ ಹಿಂದೆಯೂ, ಬಹಿರಂಗವಾಗಿ ಬಿಜೆಪಿ ಚರ್ಚೆಗೆ ಆಹ್ವಾನಿಸಿತ್ತು ಎಂದರು.

ಸರ್ಕಾರದಲ್ಲಿ ಆರ್ಥಿಕ ದುಸ್ಥಿತಿ ಎದುರಾಗಿದೆ. ರೂ. ೨೦೦ ಕೋಟಿ ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಬಿಜೆಪಿ ಸರ್ಕಾರವಿದ್ದಾಗ ಅನುದಾನ ಬಿಡುಗಡೆ ಮಾಡಿತ್ತು. ಆದರೆ, ಇದೀಗ ಆರ್ಥಿಕ ಕುಸಿತದಿಂದ ಅನುದಾನವನ್ನು ಅಭಿವೃದ್ಧಿಗೆ ಬಳಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದರು.

ಯಾವುದೇ ಇಲಾಖೆಗಳಲ್ಲಿ ಜನರ ಸೇವೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ೪,೫೦೦ ಬಿಪಿಎಲ್ ಪಡಿತರ ಫಲಾನುಭವಿಗಳನ್ನು ಪಟ್ಟಿಯಿಂದ ತೆಗೆಯಲಾಗಿದೆ. ವನ್ಯ ಪ್ರಾಣಿಗಳ ಹಾವಳಿ ತೀವ್ರವಾಗಿದೆ. ಕಂದಾಯ ಇಲಾಖೆಗಳಲ್ಲಿ ದಲ್ಲಾಳಿಗಳ ಪ್ರಾಮುಖ್ಯತೆ ಹೆಚ್ಚಿದೆ. ಅಧಿಕಾರಿಗಳು ಜನರ ಸೇವೆಗೆ ನಿರ್ಲಕ್ಷö್ಯ ಮನೋಭಾವವನ್ನು ತೋರುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್ ಮಾತನಾಡಿ, ಪಕ್ಷ ಸಂಘಟನೆಯಿAದ ಮತ್ತಷ್ಟು ಸದೃಢವಾಗಬೇಕಾಗಿದೆ. ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಜನರೆಡೆಗೆ ತಲುಪಿಸುವ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಮುಂದಿನ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಬಲಿಷ್ಠತೆಯನ್ನು ಕಾಣಬೇಕಾಗಿದೆ ಎಂದು ಹೇಳಿದರು.

ವೀರಾಜಪೇಟೆ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಕ್ಷದ ಬಲವರ್ಧನೆಗೆ ಪ್ರಾಮಾಣಿಕವಾಗಿ ಕಾರ್ಯಕರ್ತರು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಜನರೆಡೆಗೆ ಸಮರ್ಪಕವಾದ ಸೇವೆಯನ್ನು ಬಿಜೆಪಿ ಆಡಳಿತ ನಡೆಸಿದೆ. ಜನರು ಬಿಜೆಪಿಯ ಬಗ್ಗೆ ಉತ್ತಮ ಭರವಸೆಯನ್ನು ಹೊಂದಿದ್ದಾರೆ. ಪಕ್ಷ ಮತ್ತು ಜನರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಕಾರ್ಯವನ್ನು ಪಕ್ಷ ಮುನ್ನಡೆಸುತ್ತದೆ ಎಂದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕುಂಞAಗಡ ಅರುಣ್ ಭೀಮಯ್ಯ, ಸಹಕಾರ ಪ್ರಕೋಷ್ಠ ಜಿಲ್ಲಾ ಸಂಚಾಲಕ ಪಟ್ರಪಂಡ ರಘು ನಾಣಯ್ಯ, ಜಿಲ್ಲಾ ಎಸ್.ಟಿ ಮೋರ್ಚಾ ಅಧ್ಯಕ್ಷ ಪರಮೇಶ್ವರ, ಮಹಿಳಾ ಮೋರ್ಚಾ ಕಾರ್ಯದರ್ಶಿ ಕಾವ್ಯ ಮಧು, ತಾಲೂಕು ಪ್ರಧಾನ ಕಾರ್ಯದರ್ಶಿ ಕುಟ್ಟಂಡ ರಜಿತ್ ಕರುಂಬಯ್ಯ, ರಾಜ್ಯ ಶಿಸ್ತು ಸಮಿತಿ ಸದಸ್ಯ ಪಟ್ಟಡ ರೀನಾ ಪ್ರಕಾಶ್, ದಿಶಾ ಸಮಿತಿ ಸದಸ್ಯೆ ಕಾಂತಿ ಸತೀಶ್ ಸೇರಿದಂತೆ ಬೂತ್ ಪ್ರಮುಖರು, ಶಕ್ತಿ ಕೇಂದ್ರದ ಪ್ರಮುಖರು ಹಾಜರಿದ್ದರು.