ಮಡಿಕೇರಿ, ಫೆ. ೨೫: ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೊಡಗು ರೌಂಡ್ ಟೇಬಲ್ ಘಟಕದ ವತಿಯಿಂದ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ಸಮುದಾಯ ಸೇವಾ ಕಾರ್ಯಕ್ರಮವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ವೀರಾಜಪೇಟೆಯ ಆಶೀರ್ವಾದ್ ಆಸ್ಪತ್ರೆಯಲ್ಲಿ ಶಿಬಿರ ಏರ್ಪಡಿಸಲಾಗಿದ್ದು, ೩೩ ದಾನಿಗಳ ಮೂಲಕ ೧೨ ಲೀಟರ್ ರಕ್ತ ಸಂಗ್ರಹಿಸಲಾಯಿತು. ರಕ್ತದಾನದ ಮಹತ್ವ ಹಾಗೂ ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಈ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಪ್ರಮುಖರು ಈ ಬಗ್ಗೆ ಮಾಹಿತಿ ಒದಗಿಸಿದರು. ಹಲವರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ವೀರಾಜಪೇಟೆಯ ಅಧ್ಯಕ್ಷ ಡಾ. ಮಾತಂಡ ಆರ್. ಅಯ್ಯಪ್ಪ, ಕಾರ್ಯದರ್ಶಿ ಡಾ. ಕೆ.ಸಿ. ಗೌರವ್ ಅಯ್ಯಪ್ಪ, ಕೊಡಗು ರೌಂಡ್ ಟೇಬಲ್ ಘಟಕದ ಅಧ್ಯಕ್ಷ ಆಶಿಕ್ ಬೋಪಣ್ಣ, ಕಾರ್ಯದರ್ಶಿ ಎಂ.ಟಿ. ಮಾಚಯ್ಯ, ಖಜಾಂಚಿ ಕಣ್ಮ ಕಾಳಯ್ಯ ಮತ್ತಿತರರು ಪಾಲ್ಗೊಂಡಿದ್ದರು.