*ಗೋಣಿಕೊಪ್ಪ, ಫೆ. ೨೪: ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ತುಂಬಲು ಹಿರಿಯರು ಮರೆತು ಹೋಗುತ್ತಿರುವುದು ದುರಾದೃಷ್ಟಕರ ಬೆಳವಣಿಗೆ ಎಂದು ಸಾಹಿತಿ, ನಿವೃತ್ತ ಪ್ರಾಂಶುಪಾಲ ಡಾ.ಜೆ ಸೋಮಣ್ಣ ವಿಷಾಧಿಸಿದರು.
ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಕೊಡಗು ಜಿಲ್ಲಾ ಪೊನ್ನಂಪೇಟೆ ತಾಲೂಕು ಮತ್ತು ಹೋಬಳಿ ಸಾಹಿತ್ಯ ಪರಿಷತ್ ಹಾಗೂ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಆಯೋಜನೆಗೊಂಡ ದಿ.ಗಂಗಾಧರ್ ಶೆಟ್ ಮತ್ತು ಸುಲೋಚನಾ ದತ್ತಿ ಮತ್ತು ದಿ.ಎನ್ ಮಹಾಬಲೇಶ್ವರ ಭಟ್ ದತ್ತಿ ಕಾರ್ಯಕ್ರಮದಲ್ಲಿ ‘ಕೊಡಗಿನ ಸ್ವಾತಂತ್ರ÷್ಯ ಹೋರಾಟಗಾರರು’ ಎಂಬ ವಿಚಾರವಾಗಿ ನಡೆದ ಉಪನ್ಯಾಸದಲ್ಲಿ ಮಾತನಾಡಿದ ಅವರು, ಕೊಡಗು ಪುಟ್ಟ ಜಿಲ್ಲೆಯಾದರೂ ಸ್ವಾತಂತ್ರ÷್ಯ ಹೋರಾಟಕ್ಕೆ ಅಪಾರ ಕೊಡುಗೆಯನ್ನು ನೀಡಿದೆ. ಬಲಿದಾನಗಳನ್ನು ನೀಡಿದೆ. ೧೮೫೭ರಲ್ಲಿ ನಡೆದ ಸಿಪಾಯಿ ದಂಗೆಯ ಮೊದಲೇ ಕೊಡಗಿನ ಪ್ರಾಂತ್ಯದಲ್ಲಿ ೧೮೩೭ ರಲ್ಲಿ ಅಮರ ಸುಳ್ಯ ದಂಗೆ ನಡೆದಿತ್ತು. ಗುಡ್ಡೆಮನೆ ಅಪ್ಪಯ್ಯ, ಕೆದಂಬಾಡಿ ರಾಮಯ್ಯ ಅವರ ಹೋರಾಟಗಳೇ ಇದಕ್ಕೆ ಉದಾಹರಣೆ ಎಂದು ಮನವರಿಕೆ ಮಾಡಿದರು.
ಬ್ರಿಟಿಷರ ವಿರುದ್ಧ ತೀವ್ರವಾಗಿ ಹೋರಾಟ ಮಾಡುವ ಮೂಲಕ ಸ್ವಂತಿಕೆಯ ಬದುಕಿಗೆ ಈ ನೆಲದ ಸಾಕಷ್ಟು ಹೋರಾಟಗಾರರು ತನು ಮನವನ್ನು ಅರ್ಪಿಸಿದ್ದಾರೆ. ಮಹಿಳಾಪರ ಮತ್ತು ಬಡವರ ನಿಲುವನ್ನು ವ್ಯಕ್ತಪಡಿಸುವ ಮೂಲಕ ಸ್ವಾತಂತ್ರ÷್ಯ ಹೋರಾಟದ ಕಿಚ್ಚನ್ನು ಮತ್ತಷ್ಟು ಹಬ್ಬಿಸಲು ಗಾಂಧೀಜಿ ಈ ನೆಲದಲ್ಲಿ ಪ್ರೇರಣೆಯಾಗಿದ್ದಾರೆ. ಹಿರಿಯರು ತಿಳಿದ ವಿಚಾರಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಮೂಲಕ ಈ ನೆಲದ ಸ್ವಾತಂತ್ರ÷್ಯ ಹೋರಾಟದ ಜೀವಂತಿಕೆಯನ್ನು ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗೋಣಿಕೊಪ್ಪ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಚಂದನ ಮಂಜುನಾಥ್ ಮಾತನಾಡಿ, ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ತನ್ನದೇ ಆದ ಪಾರಂಪರಿಕ ಹಿನ್ನೆಲೆ ಇದೆ. ಪ್ರಾಂತ್ಯದಿAದ ಪ್ರಾಂತ್ಯಕ್ಕೆ ನುಡಿಯುವ ಸ್ವರಗಳಲ್ಲಿ ವ್ಯತ್ಯಾಸಗಳು ಕಾಣಬಹುದೇ ಹೊರತು ಭಾಷೆಯ ಪ್ರಾಮುಖ್ಯತೆ ಕನ್ನಡವೇ ಆಗಿದೆ. ಕನ್ನಡ ಭಾಷೆ ಈಜಿಪ್ಟ್ ಮತ್ತು ಮೆಸಪಟೋಮಿಯ ನಾಗರಿಕತೆಯಿಂದಲೇ ಬೆಳೆದು ಬಂದಹ ಗುರುತುಗಳು ಸಿಗುತ್ತವೆ ಎಂದು ತಿಳಿಸಿದರು. ಜಗತ್ತಿನ ಸಾವಿರಾರು ಭಾಷೆಗಳಿಗೆ ಹೋಲಿಕೆ ಮಾಡಿದಾಗ ಬಹಳ ಸರಳವಾಗಿ, ಸೌಂದರ್ಯವಾಗಿ ಮನಕ್ಕೆ ತಗಲುವಂತೆ ಮಾತನಾಡುವ ಭಾಷೆ ಕನ್ನಡವಾಗಿದೆ. ಅಪಾರ ಸಂಪತ್ತನ್ನು ಕನ್ನಡ ಹೊಂದಿದ್ದು ಈ ಹಿನ್ನೆಲೆಯಲ್ಲಿಯೇ ಸಾಹಿತ್ಯದ ಬೆಳವಣಿಗೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಎಂದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಮಾತನಾಡಿ, ಮಕ್ಕಳ ಭೌತಿಕ ಬೆಳವಣಿಗೆಯ ಜೊತೆಗೆ ಜ್ಞಾನದ ಬೆಳವಣಿಗೆಯು ಹೆಚ್ಚಾಗಬೇಕು. ಈ ಹಿನ್ನೆಲೆಯಲ್ಲಿ ಪರಿಷತ್ತಿನಲ್ಲಿ ಹಲವಾರು ದತ್ತಿ ಕಾರ್ಯಕ್ರಮಗಳನ್ನು ಸ್ಥಾಪಿಸಲಾಗಿದೆ. ಈ ಹಿಂದೆ ೧೯ಕ್ಕೆ ಸೀಮಿತವಾಗಿದ್ದ ದತ್ತಿಗಳು ೪೦ ರಿಂದ ೪೫ಕ್ಕೆ ಏರಿಕೆಯಾಗಿವೆ ಎಂದರು.
ದತಿ ಪ್ರತಿಷ್ಠಾಪನ ದಾನಿಗಳಾದ ಎಂ.ಜಿ ಮೋಹನ್ ಮಾತನಾಡಿ, ಸ್ವಾತಂತ್ರ÷್ಯ ಹೋರಾಟಕ್ಕೆ ತ್ಯಾಗ ಮಾಡಿದವರನ್ನು ನೆನೆಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ದೇಶದ ವ್ಯಕ್ತಿಯೊಬ್ಬ ಕಟ್ಟಕಡೆಯದಾಗಿ ಎಲ್ಲಿ ನೆಲೆಸುತ್ತಾನೋ ಅಲ್ಲಿ ಹೊಸ ಜೀವನ ಮತ್ತು ಮಾನವೀಯತೆಯ ಆನಂದವನ್ನು ಹೊಂದಿಸುವುದು ಮತ್ತು ಪಡೆದುಕೊಳ್ಳುವುದು ಕರ್ತವ್ಯ ಆಗಿದೆ. ತಂದೆ-ತಾಯಿಯ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಿ ಮಕ್ಕಳ ಜ್ಞಾನದ ವಿಸ್ತರತೆಗೆ ಅನುಕೂಲ ಒದಗಿಸುವುದೇ ಪ್ರಾಮುಖ್ಯತೆಯಾಗಿದೆ ಎಂದು ಹೇಳಿದರು.
ಪೊನ್ನಂಪೆಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಪರಿಷತ್ ಮಕ್ಕಳ ಚಿಂತನಶೀಲವನ್ನು ವಿಸ್ತಾರ ಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಮುಂದಿನ ದಿನಗಳಲ್ಲಿಯೂ ಹೊಸ ಯೋಜನೆಗಳನ್ನು ಮತ್ತು ಮಕ್ಕಳ ಕಲಿಕೆಗೆ ಪೂರಕವಾಗಿ ಸಲ್ಲಬೇಕಾದ ಕಾರ್ಯಕ್ರಮಗಳನ್ನು ಒದಗಿಸಿಕೊಡುವ ಚಿಂತನೆ ಹೊಂದಲಾಗಿದೆ ಎಂದು ಹೇಳಿದರು.
ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬೀಟಿ, ಮುಖ್ಯೋಪಾಧ್ಯಾಯ ಹೆಚ್.ಕೆ ಕುಮಾರ್, ದತ್ತಿ ದಾನಿಗಳ ಸಹೋದರ ಹಾಗೂ ಉದ್ಯಮಿ ಎಂ. ನಾಗರಾಜ್, ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಖಜಾಂಚಿ ಪ್ರಮೋದ್ ಕಾಮತ್, ಪೊಲೀಸ್ ಸಿಬ್ಬಂದಿ ಮಂಜುನಾಥ್ ಮತ್ತು ಪೊನ್ನಂಪೇಟೆ ತಾಲೂಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಕೆ.ವಿ ರಾಮಕೃಷ್ಣ, ಟಿ.ಜಿ ಜೀವನ್, ಕೋಶಾಧಿಕಾರಿ ಪಿ.ಜಿ ರಾಜಶೇಖರ್, ಶಿಕ್ಷಕರುಗಳಾದ ಮಹೇಶ್, ರೋಜಿû ಇದ್ದರು.