ಮಡಿಕೇರಿ, ಫೆ. ೨೪: ವನ್ಯಜೀವಿ ದಾಳಿಯಿಂದ ಜಾನುವಾರುಗಳು ಸಾವನ್ನಪ್ಪಿರುವ ಘಟನೆ ಮಡಿಕೇರಿ ಸಮೀಪದ ಇಬ್ನಿವಳವಾಡಿಯಲ್ಲಿ ನಡೆದಿದೆ.
ಹುಲಿದಾಳಿಯಿಂದ ಜಾನುವಾರುಗಳು ಬಲಿಯಾಗುತ್ತಿರುವ ಅನುಮಾನ ವ್ಯಕ್ತವಾಗಿದ್ದು, ಅರಣ್ಯ ಇಲಾಖೆ ಈ ಬಗ್ಗೆ ತನಿಖೆ ನಡೆಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸಿ.ಎಸ್. ಸೋಮಯ್ಯ ಎಂಬವರಿಗೆ ಸೇರಿದ್ದ ೨ ಕರುಗಳು ಕಳೆದ ತಿಂಗಳು ನಾಪತ್ತೆಯಾಗಿದ್ದು, ಕೆಲದಿನಗಳ ನಂತರ ಹಸುವಿನ ಕಳೇಬರದ ಭಾಗಗಳು ಪತ್ತೆಯಾಗಿದ್ದವು. ನಂತರ ೧ ಎತ್ತು ಹಾಗೂ ೧ ಹಸುವಿನ ಮೇಲೆ ದಾಳಿಯಾಗಿ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿತ್ತು. ತಾ. ೧೮ ರಂದು ಮತ್ತೊಮ್ಮೆ ಜಾನುವಾರು ಮೇಲೆ ದಾಳಿಯಾಗಿದ್ದು, ಗಂಭೀರ ಸ್ಥಿತಿಯಲ್ಲಿದೆ ಎಂದು ಮಾಲೀಕರು ತಿಳಿಸಿದ್ದಾರೆ. ಹುಲಿ ಅಥವಾ ಚಿರತೆ ದಾಳಿ ನಡೆಸಿರುವ ಅನುಮಾನಗಳಿದ್ದು, ಅರಣ್ಯ ಇಲಾಖೆ ಪರಿಶೀಲಿಸಿ ಸ್ಪಷ್ಟನೆ ನೀಡಿದ ನಂತರವಷ್ಟೆ ದಾಳಿ ಯಾವ ಪ್ರಾಣಿಯಿಂದಾಗಿದೆ ಎಂಬುದರ ಸತ್ಯಾಂಶ ತಿಳಿದು ಬರಲಿದೆ. ಆದರೆ, ಅರಣ್ಯ ಇಲಾಖೆ ಯಾವುದೇ ಕ್ರಮಕೈಗೊಳ್ಳದೆ ನಿರ್ಲಕ್ಷö್ಯ ವಹಿಸುತ್ತಿದೆ. ಕಾಟಾಚಾರಕ್ಕೆ ಕ್ಯಾಮರ ಅಳವಡಿಸಿದ್ದು, ಬಿಟ್ಟರೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಹೀಗೆ ಮುಂದುವರೆದರೆ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.