ಮಡಿಕೇರಿ, ಫೆ. ೨೩: ಕೊಡಗು ಕ್ರಿಶ್ಚಿಯನ್ ಅಸೋಸಿಯೇಷನ್ ವತಿಯಿಂದ ಏ. ೨೪ ಮತ್ತು ೨೫ ರಂದು ನಡೆಯಲಿರುವ ಸಂಭ್ರಮದ ಕೆಸಿಎ ಕ್ರಿಕೆಟ್ ಟೂರ್ನಿಯ ಪೂರ್ವಭಾವಿ ಸಭೆ ವೀರಾಜಪೇಟೆಯಲ್ಲಿ ನಡೆಯಿತು. ಅಸೋಸಿಯೇಷನ್ ಅಧ್ಯಕ್ಷ ಎ.ಜೆ. ಬಾಬು ಅಧ್ಯಕ್ಷತೆಯಲ್ಲಿ ವೀರಾಜಪೇಟೆಯ ಸಂತ ಅನ್ನಮ್ಮ ದೇವಾಲಯದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದ ಪದಾಧಿಕಾರಿಗಳು ಕ್ರಿಕೆಟ್ ಟೂರ್ನಿಯ ಯಶಸ್ಸಿಗೆ ಅಗತ್ಯವಿರುವ ರೂಪುರೇಷಗಳ ಕುರಿತು ಚರ್ಚಿಸಿದರು.

ಸಮುದಾಯದ ಸಂಘಟನೆ ಹಾಗೂ ಮನೋರಂಜನೆಗಾಗಿ ಕ್ರಿಕೆಟ್ ಟೂರ್ನಿಯೊಂದಿಗೆ ಹಗ್ಗಜಗ್ಗಾಟ, ಥ್ರೋಬಾಲ್ ಮತ್ತು ಶಾಟ್‌ಪುಟ್ ಸ್ಪರ್ಧೆಯನ್ನು ಎರಡು ದಿನಗಳ ಕಾಲ ಆಯೋಜಿಸಲು ನಿರ್ಧರಿಸಲಾಯಿತು. ಕೆಸಿಎ ಕ್ರಿಕೆಟ್ ಟೂರ್ನಿಯ ವಿಜೇತ ತಂಡಕ್ಕೆ ರೂ. ೧ ಲಕ್ಷ ಮತ್ತು ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. ೫೦ ಸಾವಿರ ನಗದು ಬಹುಮಾನ ನೀಡಲಾಗುವುದು. ಪುರುಷರು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ವಿಭಾಗಗಳಲ್ಲಿ ಹಗ್ಗಜಗ್ಗಾಟ, ಶಾಟ್ ಪುಟ್ ಮತ್ತು ಮಹಿಳೆಯರಿಗಾಗಿ ಥ್ರೋಬಾಲ್ ಪಂದ್ಯ ನಡೆಯಲಿದೆ. ವೀರಾಜಪೇಟೆಯ ಸಂತ ಅನ್ನಮ್ಮ ಚರ್ಚ್ ಮೈದಾನದಲ್ಲಿ ಪಂದ್ಯಾವಳಿಗಳು ನಡೆಯಲಿದ್ದು, ಪ್ರತಿಯೊಂದು ಸ್ಪರ್ಧೆಯ ವಿಜೇತರಿಗೂ ಆಕರ್ಷಕ ನಗದು ಬಹುಮಾನ ಹಾಗೂ ಟ್ರೋಫಿಯನ್ನು ನೀಡಲಾಗುವುದು. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವವರು ಡಾಡು ಜೋಸೆಫ್ (೯೪೮೩೩೦೩೬೭೬), ಜೋಬಿ ಅಮ್ಮತ್ತಿ (೮೧೨೩೮೨೩೮೬೦) ಅವರನ್ನು ಸಂಪರ್ಕಿಸಬಹುದಾಗಿದೆ.

ಸಭೆಯಲ್ಲಿ ಕಾರ್ಯದರ್ಶಿ ಸಿ.ಜೆ. ಅಂತೋಣಿ, ಜಂಟಿ ಕಾರ್ಯದರ್ಶಿ ಬಿಂದುಸಾರ, ಖಜಾಂಚಿ ಬೇಬಿ ಎಂ.ಟಿ., ಪ್ರಮುಖರಾದ ಜೋಬಿ ಅಮ್ಮತ್ತಿ, ಪ್ರವೀಣ್ ಜಾನ್ಸನ್, ರಿಜೋಶ್ ಜೋಸೆಫ್, ಅಂತೋಣಿ ರಾಬಿನ್, ಬಿನೀಶ್, ಅಂತೋಣಿ ಜೋಸೆಫ್ ಮತ್ತಿತರರು, ಉಪಸ್ಥಿತರಿದ್ದರು.