ಮಡಿಕೇರಿ, ಫೆ. ೨೨: ಒಳ ಮೀಸಲಾತಿ ವಿಚಾರದಲ್ಲಿ ದಲಿತ ಸಮುದಾಯ ಅಪಪ್ರಚಾರಗಳಿಗೆ ಕಿವಿಗೊಡಬಾರದೆಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಕರೆ ನೀಡಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ) ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಜಿಲ್ಲೆಯ ದಲಿತರ ಸ್ವಾಭಿಮಾನಿ ಸಮಾವೇಶ, ಕರ್ನಾಟಕ ದಲಿತ ರತ್ನ, ಕೊಡಗು ರತ್ನ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಳ ಮೀಸಲಾತಿ ವಿಚಾರದಲ್ಲಿ ಆರ್‌ಎಸ್‌ಎಸ್, ಬಿಜೆಪಿ ಹಾಗೂ ಎಬಿವಿಪಿ ದಲಿತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಸಚಿವರು ಒಳಮೀಸಲಾತಿ ವಿಚಾರದಲ್ಲಿ ಯಾರಿಗೂ ಅನ್ಯಾಯವಾಗದಂತೆ ಕಾನೂನುಗಳನ್ನು ಜಾರಿಗೊಳಿಸಲಾಗುವುದು; ಆದ್ದರಿಂದ ದಲಿತ ಸಮುದಾಯ ಅಪಪ್ರಚಾರಗಳಿಗೆ ಕಿವಿಗೊಡಬಾರದೆಂದರು. ೧೯೨೪ರಲ್ಲಿ ಅಂಬೇಡ್ಕರ್ ಅವರು ಬಹಿಷ್ಕೃತರ ಬೆಂಬಲಕ್ಕಾಗಿ ಬಹಿಷ್ಕೃತರ ಹಿತಕಾರಿಣಿ ಸಭೆ ಎಂಬ ಸಂಘಟನೆಯನ್ನು ಕಟ್ಟಿದ್ದರು. ಆ ಮೂಲಕ ದಲಿತರಿಗೆ ಶಿಕ್ಷಣ, ಸಂಘಟನೆ ಹೋರಾಟಕ್ಕೆ ಪ್ರೇರೇಪಣೆ ನೀಡಿದರು.ಸಂವಿಧಾನದ ಪೀಠಿಕೆಯಲ್ಲಿ ನಾವೆಲ್ಲರೂ ಭಾರತೀಯರು ಎಂದು ಹೇಳಲಾಗಿದೆ ಹೊರತು ಯಾವುದೇ ಜಾತಿ ಧರ್ಮದವರೆಂದು ಪ್ರಸ್ತಾಪಿಸಿಲ್ಲ. ಹೀಗಿದ್ದರೂ ಕೂಡ ಧರ್ಮಾಂಧತೆ, ಜಾತೀಯತೆ ಈ ದೇಶದ ಸಂವಿಧಾನ ಹಾಗೂ ಅಭಿವೃದ್ಧಿಯ ಮೇಲೆ ಸವಾರಿ ಮಾಡುತ್ತಿದೆ ಎಂದು ಸಚಿವರು ನುಡಿದರು.

“ಹೋರಾಟಗಳು ಮೌಲ್ಯಭರಿತವಾಗಿರಲಿ''

ದಲಿತ ಸಂಘಟನೆಗಳ ಹೋರಾಟಗಳು ಮೌಲ್ಯಭರಿತವಾಗಿರಬೇಕು. ಯೋಗ್ಯ ವಿಚಾರಗಳಿಗಾಗಿ ಹೋರಾಟ ಮಾಡಬೇಕು. ಗಾಳಿ ಮಾತುಗಳಿಗೆ ಹೋರಾಟ ನಡೆಯಬಾರದು, ಮೂಢನಂಬಿಕೆಗಳನ್ನು ಸರಿಸಬೇಕು, ವೈಚಾರಿಕತೆ ವೈಜ್ಞಾನಿಕ ಆಲೋಚನೆಗಳ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕೆಂದು ಸಚಿವ ಮಹದೇವಪ್ಪ ದಲಿತ ಸಂಘಟನೆಗಳಿಗೆ ಕಿವಿಮಾತು ಹೇಳಿದರು.

“ಸಂಘಟನೆಗಳು ಒಂದಾಗಬೇಕು''

ದಲಿತ ಸಂಘಟನೆಗಳಲ್ಲಿ ಬಣಗಳ ವ್ಯತ್ಯಾಸ ಇರಬಾರದು ಎಲ್ಲಾ ಸಂಘಟನೆಗಳು ಒಂದಾಗಬೇಕು. ಎಲ್ಲವೂ ಒಂದೇ ವೇದಿಕೆಯಡಿ ಒಟ್ಟಾಗಿ ಕಲೆತು ಒಂದಾಗಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಉಳಿಸಲು ಹಾಗೂ ಬಲಪಡಿಸಲು ಹೋರಾಡಬೇಕು. ಮಡಿಕೇರಿಯಲ್ಲಿ ಅಂಬೇಡ್ಕರ್ ಪ್ರತಿಮೆ ಉದ್ಘಾಟನೆ ವೇಳೆಗೆ ಎಲ್ಲಾ ದಲಿತ ಮುಖಂಡರು ಒಂದಾಹಿ ಬೃಹತ್ ಸಮಾವೇಶ ಮಾಡುವಂತಾಗಬೇಕೆAದು ಅವರು ಆಶಿಸಿದರು. ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ)

“ಸಂವಿಧಾನದಿAದ ಸಮಾನತೆ''

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಶಾಸಕರಾದ ಎ.ಎಸ್. ಪೊನ್ನಣ್ಣ ಮಾತನಾಡಿ, ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿAದಾಗಿ ಎಲ್ಲರಿಗೂ ಸಮಾನತೆ ಎಂಬುದು ಸಿಗುವಂತಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೌರವ ಸಿಗುವಂತಾಗಿದೆ ಎಂದರು. ಶೋಷಣೆ ಹಾಗೂ ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸಿದ ಅಂಬೇಡ್ಕರ್ ಹಾಗೂ ಅವರು ರಚಿಸಿದ ಸಂವಿಧಾನವನ್ನು ಪ್ರತಿಯೊಬ್ಬರೂ ಸದಾ ಸ್ಮರಿಸಬೇಕು ಎಂದು ನುಡಿದರು.

“ ಹೆಣ್ಣು ಮಕ್ಕಳು ಮುಂದೆ ಬರಬೇಕು''

ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್‌ಗೌಡ ಮಾತನಾಡಿ, ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸೂಕ್ತ ಸ್ಥಾನಮಾನ ಲಭಿಸಿ ಹೆಣ್ಣುಮಕ್ಕಳು ಅಭಿವೃದ್ಧಿ ಹೊಂದಿ ಮುಂದೆ ಬಂದರೆ ಸಮಾಜವೂ ಕೂಡ ಅಭಿವೃದ್ಧಿಯಾಗುತ್ತದೆ ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳಿಗೆ ಸೂಕ್ತ ಸ್ಥಾನಮಾನ ನೀಡುವಂತಾಗಬೇಕು. ದಲಿತ ಸಂಘಟನೆಗಳೆಲ್ಲವೂ ಒಂದಾಗಬೇಕೆAದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ವಹಿಸಿದ್ದರು. ವೇದಿಕೆಯಲ್ಲಿ ಅತಿಥಿಗಳಾಗಿ ಕೆಪಿಸಿಸಿ ವಕ್ತಾರ ಎಂ. ಲಕ್ಷö್ಮಣ್, ಹೈಕೋರ್ಟ್ ವಕೀಲ ಚಂದ್ರಮೌಳಿ, ನಿವೃತ್ತ ಸಹಾಯಕ ಉಪ ವೈದ್ಯಾಧಿಕಾರಿ ಹೆಚ್.ವಿ. ದೇವದಾಸ್, ಸ್ತಿçÃರೋಗ ತಜ್ಞೆ ಡಾ. ಸೌಮ್ಯ, ದಂಬೆಕೋಡಿ ಕವನ ಭೀಷ್ಮ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ. ಸತೀಶ್, ಇಸಾಕ್ ಖಾನ್, ಕಾಂಗ್ರೆಸ್ ಜಿಲ್ಲಾ ಪ. ಜಾತಿ, ಪಂಗಡದ ಅಧ್ಯಕ್ಷ ಜಯೇಂದ್ರ, ದಲಿತ ಮುಖಂಡ ಜಯಪ್ಪ ಹಾನಗಲ್, ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಕಾಂಗ್ರೆಸ್ ಮಡಿಕೇರಿ ಬ್ಲಾಕ್ ಅಧ್ಯಕ್ಷ ಹಂಸ, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಮೂಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಸದಸ್ಯ ಆರ್.ಪಿ. ಚಂದ್ರಶೇಖರ್, ಉದ್ಯಮಿ ಶರೀನ್ ಉಪಸ್ಥಿತರಿದ್ದರು.

ಅಂಬೇಡ್ಕರ್ ವಿಚಾರವಾದಿ ಮೋಹನ್ ಮೌರ್ಯ ನಿರೂಪಿಸಿದರು. ಮಡಿಕೇರಿ ತಾಲೂಕು ದಸಂಸ ಸಂಚಾಲಕ ದೀಪಕ್ ಪೊನ್ನಪ್ಪ ಪ್ರಾಸ್ತಾವಿಕ ನುಡಿಯಾಡಿ ಸಮಿತಿ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿಯಿತ್ತರು. ಮೇಘ ದೀಪಕ್ ಸಂವಿಧಾನದ ಪೀಠಿಕೆ ಬೋಧಿಸಿದರು. ಕೊಡ್ಲಿಪೇಟೆಯ ಮಾನವತಾ ಕಲಾ ತಂಡದಿAದ ಪ್ರಾರ್ಥನೆ ಹಾಗೂ ಗೀತಗಾಯನ ನಡೆಯಿತು. ದಸಂಸ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಸಂತೋಷ್ ಕುಮಾರ್ ಸ್ವಾಗತಿಸಿದರು.

ಸಮಾವೇಶಕ್ಕೂ ಮುನ್ನ ಅಶೋಕಪುರ ಬಳಿಯಿಂದ ನಗರದ ಮುಖ್ಯ ಬೀದಿಗಳಲ್ಲಿ ಗಾಂಧಿಮೈದಾನದವರೆಗೆ ಬುದ್ಧ, ಅಂಬೇಡ್ಕರ್ ಅವರ ರಥ, ವೀರಗಾಸೆ ಕುಣಿತವನ್ನು ಒಳಗೊಂಡು ಮೆರವಣಿಗೆ ನಡೆಯಿತು.