ನಾಪೋಕ್ಲು, ಫೆ. ೨೨: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿರಂತರವಾಗಿ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಭಾಗಗಳಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನೆ ಹಾಗೂ ನೂತನವಾಗಿ ಪ್ರಾರಂಭವಾಗಲಿರುವ ಕಾಮಗಾರಿಗಳ ಭೂಮಿಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು. ಈ ವ್ಯಾಪ್ತಿಯಲ್ಲಿ ಮೂರು ರಸ್ತೆಗಳ ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ ನಾಲ್ಕು ರಸ್ತೆಗಳ ಕಾಮಗಾರಿಯನ್ನು ಸದ್ಯದಲ್ಲೇ ಆರಂಭಿಸಲಾಗುವುದು. ಉಳಿದಂತೆ ನಡೆಯಬೇಕಾದ ೪೦ ಲಕ್ಷ ರೂಪಾಯಿ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು ಕೆಲಸ ಪ್ರಾರಂಭಿಸಲಾಗುವುದು ಎಂದರು.

ಇಲ್ಲಿಯ ತೋಟಗಾರಿಕಾ ಇಲಾಖೆ ಫಾರ್ಮ ಬಳಿಯಿಂದ ಮಕ್ಕಿ ಶಾಸ್ತವು ದೇವಾಲಯದ ಸಂಪರ್ಕ ರಸ್ತೆ ಕಾಮಗಾರಿ ರೂ. ೧೦ ಲಕ್ಷ ವೆಚ್ಚದಲ್ಲಿ ಪೂರ್ಣಗೊಂಡಿದ್ದು ಇದರ ಉದ್ಘಾಟನೆಯನ್ನು ನೆರವೇರಿಸಿದರು ಬಳಿಕ. ಕೊಳಕೇರಿಯಿಂದ ಬೊಟ್ಟೋಳಂಡ, ಕಲಿಯಂಡ ಐನ್ ಮನೆಗಳಿಗೆ ತೆರಳುವ ಸಂಪರ್ಕ ರಸ್ತೆಗೆ ಭೂಮಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಸದಸ್ಯರಾದ, ಮಾಚೇಟಿರ ಕುಸು ಕುಶಾಲಪ್ಪ, ಕೆ.ಎ. ಇಸ್ಮಾಯಿಲ್, ಕುಲ್ಲೇಟಿರ ಅರುಣ್ ಬೇಬ, ಹೇಮಾವತಿ ಅರುಣ್, ಮಾಜಿ ಅಧ್ಯಕ್ಷ ಎಂ.ಹೆಚ್. ಅಬ್ದುಲ್ ರೆಹಮಾನ್, ಸಂಪನ್ ಅಯ್ಯಪ್ಪ, ಸಿರಾಜ್, ವಾಸಿಮ್, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಗ್ರಾಮಸ್ಥರು ಹಾಜರಿದ್ದರು.

ಒಟ್ಟು ರೂ. ೪೦ ಲಕ್ಷ ವೆಚ್ಚದಲ್ಲಿ ನಡೆಯಲಿರುವ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ರೂ. ೪೦ ಲಕ್ಷ ವೆಚ್ಚದಲ್ಲಿ ಪೂರ್ಣಗೊಂಡ ರಸ್ತೆಗಳ ಉದ್ಘಾಟನೆ ಜರುಗಿತು.