ಮಡಿಕೇರಿ, ಫೆ. ೨೧: ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಪ್ರಯುಕ್ತ ನಡೆದ ಮೆರವಣಿಗೆಯ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿರುವುದನ್ನು ಖಂಡಿಸಿ ನಗರದಲ್ಲಿ ಹಿಂದೂ ಸಂಘಟನೆಗಳಿAದ ಪ್ರತಿಭಟನೆ ನಡೆಯಿತು.

ನಗರದ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಘಟನೆ ಖಂಡಿಸಿದರು. ಹಿಂದೂ ಧಾರ್ಮಿಕ ಮೆರವಣಿಗೆ ಮೇಲೆ ಕಲ್ಲು ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆಯ ಕರ್ನಾಟಕದ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಅಜಿತ್ ಮಾತನಾಡಿ, ಹಿಂದೂ ಧಾರ್ಮಿಕ ಆಚರಣೆ, ಮೆರವಣಿಗೆಯ ಮೇಲೆ ದುಷ್ಕರ್ಮಿಗಳು ದೇಶದ ಹಲವೆಡೆ ಕಲ್ಲು, ಚಪ್ಪಲಿ ಎಸೆದು ಅವಮಾನಗೊಳಿಸುವುದು ನಿರಂತರವಾಗಿ ನಡೆಯುತ್ತಿದೆ. ಮದ್ದೂರಿನಲ್ಲಿ ಗಣೇಶನ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿತ್ತು. ಹಿಂದೂ ಸಮಾಜ ಈ ರೀತಿಯ ಘಟನೆಯನ್ನು ಯಾವತ್ತೂ ನಡೆಸಿಲ್ಲ, ಮತಾಂಧರು ಈ ರೀತಿ ನೂರಾರು ಕೃತ್ಯಗಳನ್ನು ನಡೆಸಿ ಅಶಾಂತಿಗೆ ಕಾರಣವಾಗುತ್ತಿದ್ದಾರೆ. ಇದರ ಹಿಂದೆ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭ ಪ್ರತಿಭಟನೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಸಹ ಸಂಚಾಲಕ ಕುಮಾರ್, ಜಿಲ್ಲಾ ಪ್ರಮುಖರಾದ ಚೇತನ್, ಸುನಿಲ್ , ಮಡಿಕೇರಿ ತಾಲೂಕು ಸಂಯೋಜಕ ಬಾಲಕೃಷ್ಣ ರೈ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ಅಧ್ಯಕ್ಷ ರಾಬಿನ್ ದೇವಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಜಿಲ್ಲಾ ವಕ್ತಾರ ಅರುಣ್ ಕುಮಾರ್, ನಗರಸಭಾ ಸದಸ್ಯರಾದ ಉಮೇಶ್ ಸುಬ್ರಮಣಿ, ಎಸ್.ಸಿ. ಸತೀಶ್, ಸಬಿತ, ಚಂದ್ರಶೇಖರ್, ಜಿಲ್ಲಾ ಕಾರ್ಯದರ್ಶಿ ಕನ್ನಿಕೆ, ಬಿ.ಕೆ. ಜಗದೀಶ್, ಕನ್ನಂಡ ಸಂಪತ್ ಹಾಗೂ ಇತರರು ಇದ್ದರು.