ಸಿದ್ದಾಪುರ, ಫೆ. ೨೧: ತಲತಲಾಂತರಗಳಿAದ ತೋಟದ ಲೈನ್ ಮನೆಗಳಲ್ಲಿ, ಬಾಡಿಗೆ ಮನೆಗಳಲ್ಲಿ, ನದಿ ತೀರದಲ್ಲಿ ವಾಸ ಮಾಡುತ್ತಿರುವ ನಿವೇಶನ ರಹಿತರ ಸಮಾವೇಶವು ಗುಹ್ಯ ಅಗಸ್ತೇಶ್ವರ ಸಹಕಾರ ಸಂಘದ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದಲ್ಲಿ ನಡೆದ ಸಮಾವೇಶದಲ್ಲಿ ಜಿಲ್ಲೆಯ ನಿವೇಶನ ರಹಿತರ ಸಮಸ್ಯೆಗಳನ್ನು ಆಲಿಸಿ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ನಿವೇಶನ ರಹಿತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನೂತನ ಸಮಿತಿಯನ್ನು ರಚಿಸಲಾಗಿದ್ದು ಅಧ್ಯಕ್ಷರಾಗಿ ಅನೀಲ್, ಉಪಾಧ್ಯಕ್ಷೆಯಾಗಿ ಸಿದ್ದಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಎಂ.ಎ. ಯಮುನಾ, ಖಜಾಂಚಿಯಾಗಿ ಸಿ.ಯು. ಮುಸ್ತಫ, ಸದಸ್ಯರಾಗಿ ಉದಯ, ಕುಶ, ಬೋಜ, ಸೋಮ, ಶಿವಪ್ಪ, ಮುತ್ತ, ನೇತ್ರ ಆಯ್ಕೆಯಾದರು.
ನಿವೇಶನ ರಹಿತರ ನೂತನ ಸಮಿತಿಯ ನೇತೃತ್ವದಲ್ಲಿ ಬಹಿರಂಗ ಸಭೆಯನ್ನು ನಡೆಸಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ (ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಹೆಚ್.ಬಿ. ರಮೇಶ್, ಕೇಂದ್ರ ಹಾಗೂ ರಾಜ್ಯ ಸರಕಾರ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು ನಿವೇಶನ ರಹಿತರ ಕನಸು ಕನಸಾಗಿಯೇ ಉಳಿದಿದೆ ಎಂದು ಆರೋಪಿಸಿದರು.
ಸಿಐಟಿಯುನ ಜಿಲ್ಲಾ ಕಾರ್ಯದರ್ಶಿ ಪಿ.ಆರ್. ಭರತ್ ಮಾತನಾಡಿ, ನಿವೇಶನ ರಹಿತ ಸಂತ್ರಸ್ತರ ಸಮಸ್ಯೆಗೆ ಇಬ್ಬರು ಶಾಸಕರುಗಳು ಸ್ಪಂದಿಸಿಲ್ಲ ಎಂದು ಆರೋಪಿಸಿದರಲ್ಲದೆ ಒತ್ತುವರಿ ದಾರರಿಂದ ತೆರವುಗೊಳಿಸಿ ಸಂತ್ರಸ್ತರಿಗೆ ಮೀಸಲಿಟ್ಟಿರುವ ಭೂಮಿಯು ಹಂಚಿಕೆಯಾಗದೆ ಪಾಳುಬಿದ್ದಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ನಿವೇಶನ ರಹಿತರ ಸಮಿತಿ ಅಧ್ಯಕ್ಷ ಅನಿಲ್, ಸಿದ್ದಾಪುರ ಗ್ರಾಮ ಪಂಚಾಯಿತಿ ನಿವೇಶನ ರಹಿತರ ಅರ್ಜಿ ಸ್ವೀಕರಿಸಿ ಕಡತದಲ್ಲಿ ಇಟ್ಟಿದ್ದು, ಯಾವುದೇ ಒಂದು ಅರ್ಜಿಯನ್ನು ಸರಕಾರದ ಮಟ್ಟಕ್ಕೆ ಕಳುಹಿಸಿ ಕೊಟ್ಟಿಲ್ಲ ಎಂದು ದೂರಿದರು.
ಗ್ರಾಮ ಸಮಿತಿ ಕಾರ್ಯದರ್ಶಿ ಎನ್.ಡಿ. ಕುಟ್ಟಪನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ಉಮ್ಮರ್, ಬೈಜು, ಹಾಜರಿದ್ದರು.