ಮಡಿಕೇರಿ, ಫೆ. ೨೦: ಮೂರ್ನಾಡು ಮಂಡಲ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ತಾ. ೨೨ ರಂದು ಮೂರ್ನಾಡಿನಲ್ಲಿ ಹಿಂದೂ ಸಂಗಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಯೋಜನಾ ಸಮಿತಿ ಅಧ್ಯಕ್ಷ ಚೆಟ್ಟಿಮಾಡ ಜಯಂತ್ ಕುಮಾರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ ೨.೧೫ ಗಂಟೆಗೆ ಹಿಂದೂ ಸಂಗಮ ಶೋಭಾಯಾತ್ರೆಯು ಮೂರ್ನಾಡು ವಿದ್ಯಾಸಂಸ್ಥೆಯ ಆಟದ ಮೈದಾನದಿಂದ ಗಾಂಧಿನಗರ, ಮಹಿಳಾ ಸಮಾಜ ಮಾರ್ಗವಾಗಿ ಮೂರ್ನಾಡು ಮುಖ್ಯ ರಸ್ತೆಯಲ್ಲಿ ಪಂಚರತ್ನ ಹೊಟೇಲ್ ಜಂಕ್ಷನ್‌ವರೆಗೆ ಸಾಗಿ ಅಲ್ಲಿಂದ ಪಾಂಡಾಣೆ ನಾಡ್‌ಮಂದ್ ಮತ್ತು ಶಾಲಾ ಮೈದಾನದವರೆಗೆ ನಡೆಯಲಿದೆ.

ಶೋಭಾಯಾತ್ರೆಗೆ ಕೇರಳದ ಚಂಡೆ, ಗೊಂಬೆ ಕುಣಿತ, ಮಕ್ಕಳ ಭಜನಾ ನೃತ್ಯ, ರಾಮಾಂಜನೇಯ ಸೀತೆ ಮಂಟಪ, ಕೊಡಗಿನ ವಾಲಗ ಇತ್ಯಾದಿಗಳು ಮೆರುಗು ನೀಡಲಿವೆ. ಬಳಿಕ ಸಂಜೆ ೪ ಗಂಟೆಗೆ ಪಾಂಡಾಣೆ ನಾಡ್‌ಮಂದ್ - ಮೂರ್ನಾಡು ಶಾಲಾ ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿಯಿತ್ತರು.

ಕಾರ್ಯದರ್ಶಿ ಪುದಿಯೊಕ್ಕಡ ಮಧು ಕುಮಾರ್ ಮಾತನಾಡಿ, ಮೂರ್ನಾಡು ವ್ಯಾಪ್ತಿಯ ಆರು ಗ್ರಾಮಗಳ ಗ್ರಾಮಸ್ಥರು, ಸ್ಥಳೀಯರು ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಹ ಕಾರ್ಯದರ್ಶಿ ವಸಂತ್ ಕೋಡಂಬೂರು, ಖಜಾಂಚಿ ಸಜೀವ್, ಸಂಯೋಜಕ ಈರ ಸುಬ್ಬಯ್ಯ ಉಪಸ್ಥಿತರಿದ್ದರು.