ವೀರಾಜಪೇಟೆ, ಫೆ. ೧೯: ಸಿವಿಲ್ ನ್ಯಾಯಾಧೀಶರಾಗಿ ಮೂಲತಃ ವೀರಾಜಪೇಟೆಯವರಾದ ಸೈಯದಾ ಕಾಶ್ಮೀರ ಸಿಮ್ರಾನ್ ಆಯ್ಕೆಯಾಗಿದ್ದಾರೆ.
ವೀರಾಜಪೇಟೆ ಪಟ್ಟಣದ ನಿವಾಸಿ ಮೌಂಟನ್ ವ್ಯೂ ಶಾಲೆಯ ಸಂಸ್ಥಾಪಕರಾದ ದಿ.ಸಯ್ಯದ್ ನಜೀರ್ ಅಹಮ್ಮದ್ ಮತ್ತು ಸೈಯದಾ ನಿಖತ್ ಅಸ್ಮ ಅವರ ಪುತ್ರಿ ಸೈಯದಾ ಕಾಶ್ಮೀರ ಸಿಮ್ರಾನ್ ಅವರು ಸಿವಿಲ್ ಜಡ್ಜ್ ನೇಮಕಾತಿ ಪರೀಕ್ಷೆಯನ್ನು ಎದುರಿಸಿ ಮೊದಲ ಪ್ರಯತ್ನದಲ್ಲಿಯೇ ೩೦ನೇ ರ‍್ಯಾಂಕ್ ಗಳಿಸಿ ನ್ಯಾಯಾಧೀಶರ ಹುದ್ದೆಗೆ ನಿಯುಕ್ತಿಗೊಂಡಿದ್ದಾರೆ.
ವೀರಾಜಪೇಟೆ ಮೌಂಟನ್ ವ್ಯೂ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆದ ಸೈಯದಾ ಅವರು, ಮಂಗಳೂರಿನಲ್ಲಿ ಪಿಯುಸಿ ಶಿಕ್ಷಣ, ಮೈಸೂರಿನ ವಿದ್ಯಾ ವಿಕಾಸ ಕಾಲೇಜಿನಲ್ಲಿ ಬಿಬಿಎ ಎಲ್‌ಎಲ್‌ಬಿ ಪದವಿ ಮುಗಿಸಿ ೨೦೨೩ರಲ್ಲಿ ವೀರಾಜಪೇಟೆ ಪಟ್ಟಣದಲ್ಲಿ ಐ.ಆರ್.ಪ್ರಮೋದ್ ಅವರ ಮಾರ್ಗದರ್ಶನದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಈ ಕುರಿತು ಪ್ರತಿಕ್ರಿಯಿಸಿ ಸೈಯದಾ ಕಾಶ್ಮೀರ ಸಿಮ್ರಾನ್ ಅವರು, ತÀನ್ನ ತಂದೆ, ತಾಯಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಮಾತ್ರವಲ್ಲ, ಹೆಣ್ಣುಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆದು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಪ್ರತಿಪಾದಿಸುತ್ತಿದ್ದರು. ಇದೀಗ ಅವರು ಕನಸನ್ನು ನನಸು ಮಾಡಿದ ತೃಪ್ತಿ ತÀನಗಿದೆ ಎಂದು ಹೇಳಿದರು. ಇವರೊಂದಿಗೆ ಐ.ಆರ್.ಪ್ರಮೋದ್ ಅವರ ಮಾರ್ಗದರ್ಶನವೂ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕಾರಣವಾಯಿತು ಎಂದು ಅವರು ನೆನಪಿಸಿಕೊಂಡರು. ಇಲ್ಲಿಯವರೆಗೆ ಐ.ಆರ್.ಪ್ರಮೋದ್ ಅವರ ಮಾರ್ಗದರ್ಶನದಲ್ಲಿ ವಕೀಲ ವೃತ್ತಿ ಮಾಡುತ್ತಿದ್ದ ಒಟ್ಟು ನಾಲ್ವರು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಒಟ್ಟು ೧೦ ಸಾವಿರ ಅಧಿಕ ಮಂದಿ ಸಿವಿಲ್ ನ್ಯಾಯಾಧೀಶರ ಹುದ್ದೆಯ ಪರೀಕ್ಷೆ ತೆಗೆದುಕೊಂಡಿದ್ದು, ಆ ಪೈಕಿ ೮೩ ಮಂದಿ ಆಯ್ಕೆಯಾಗಿದ್ದಾರೆ.