ಮಡಿಕೇರಿ, ಫೆ. ೧೯: ಕೊಡಗು ಜಿಲ್ಲೆಯಲ್ಲಿ ೪೫೦೦ ಬಿಪಿಎಲ್ ಕಾರ್ಡ್ಗಳನ್ನು ಸರ್ಕಾರ ರದ್ದುಗೊಳಿಸಿದ್ದು, ಇದು ಬಡವರಿಗೆ ಸರ್ಕಾರ ಮಾಡಿದ ಅನ್ಯಾಯವಾಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆರೋಪಿಸಿದೆ.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್.ಡಿ.ಪಿ.ಐ. ಅಧ್ಯಕ್ಷ ಅಮೀನ್ ಮೊಹಿಸಿನ್, ನಾಗರಿಕ ಸೇವೆ, ಬಡತನ ನಿರ್ಮೂಲನೆ, ಆಹಾರ, ಆರೋಗ್ಯ ಭದ್ರತೆ, ಶಿಕ್ಷಣ, ಉದ್ಯೋಗಕ್ಕೆ ಉತ್ತೇಜನ ಸರ್ಕಾರದ ಜವಾಬ್ದಾರಿಯಾಗಿದೆ. ಕಲ್ಯಾಣ ರಾಜ್ಯದ ಪರಿಕಲ್ಪನೆಗೆ ಒತ್ತುಕೊಟ್ಟು ನಾಗರಿಕ ಸೇವೆಗಳಿಗೆ ಸರ್ಕಾರಗಳು ಮುತುವರ್ಜಿ ವಹಿಸಬೇಕು. ಆದರೆ ವಿಶೇಷ ಆರ್ಥಿಕ ದುರ್ಬಲ ವರ್ಗದ ಆರ್ಥಿಕ ಮಿತಿ ೮ ಲಕ್ಷಕ್ಕೆ ನಿಗದಿಪಡಿಸಿರುವ ಸರ್ಕಾರ ಬಿಪಿಎಲ್ ಕಾರ್ಡ್ ಪಡೆಯಲು ರೂ. ೧.೨೫ ಲಕ್ಷದ ಒಳಗೆ ಆದಾಯ ಹೊಂದಿರುವವರು ಮಾತ್ರ ಬಡವರು ಎಂಬ ನಿಯಮ ಜಾರಿ ಮಾಡಿರುವುದು ನಾಗರಿಕ ಸೇವೆಯ ಪರಿಕಲ್ಪನೆಗೆ ವಿರುದ್ಧವಾಗಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆ ಹಾಗೂ ಆದಾಯ ತೆರಿಗೆ ಸಲ್ಲಿಕೆಯ ನೆಪವನ್ನು ಮುಂದಿಟ್ಟುಕೊAಡು ಬಡವರ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಲಾಗಿದ್ದು, ಕೂಡಲೇ ಅವುಗಳನ್ನು ಹಿಂತಿರುಗಿಸುವ ಕೆಲಸವನ್ನು ಸರ್ಕಾರ ಮಾಡಬೇಕೆಂದು ಅಮೀನ್ ಮೊಹಿಸಿನ್ ಆಗ್ರಹಿಸಿದರು.
ಕರ್ನಾಟಕ ರಾಜ್ಯದ ೨೦೨೬-೨೭ರ ಬಜೆಟ್‌ನಲ್ಲಿ ಕೊಡಗು ಜಿಲ್ಲೆಯ ಅಭಿವೃದ್ಧಿಗೆ ೫೦೦ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೆಜ್ ಘೋಷಣೆ ಮಾಡಬೇಕು ಮತ್ತು ಪ್ರವಾಸೋದ್ಯಮದ ಅಭಿವೃದ್ಧಿಗೆ ರೂ. ೨,೫೦೦ ಕೋಟಿ ಬಿಡುಗಡೆಗೊಳಿಸಬೇಕು.
ಕೊಡಗಿಗೆ ಅತೀ ಅಗತ್ಯವಾಗಿರುವ ರೈಲು ಸಂಪರ್ಕವನ್ನು ಕೇಂದ್ರ ಹಾಗೂ ರಾಜ್ಯದ ಪ್ರತಿಷ್ಠೆಯ ಕಿತ್ತಾಟದಿಂದ ಕೈಬಿಡಲಾಗಿದೆ. ಈ ಬಜೆಟ್‌ನಲ್ಲಿ ಕೊಡಗಿಗೆ ರೈಲು ಸಂಪರ್ಕಕ್ಕಾಗಿ ಬೇಕಿರುವ ಅನುದಾನವನ್ನು ಕರ್ನಾಟಕ ಸರಕಾರ ಮೀಸಲಿಟ್ಟು ಪ್ರಕ್ರಿಯೆ ಪ್ರಾರಂಭಿಸಬೇಕು. ಕೊಡಗಿನ ಲೋಕಸಭಾ ಸದಸ್ಯರು ಕೇಂದ್ರದೊAದಿಗೆ ಚರ್ಚಿಸಿ ಸಹಕರಿಸಬೇಕು. ತುರ್ತು ಆರೋಗ್ಯ ಸೇವೆಗಾಗಿ ಜಿಲ್ಲೆಗೆ ಏರ್ ಆಂಬ್ಯುಲೆನ್ಸ್ ನೀಡಬೇಕು. ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಅನುದಾನ ಮೀಸಲಿಡಬೇಕು. ವನ್ಯಜೀವಿ ಹಾಗೂ ಮಾನವ ಸಂಘರ್ಷ ನಿಯಂತ್ರಣಕ್ಕೆ ವಿಶೇಷ ಅನುದಾನ ನೀಡಬೇಕು ಮತ್ತು ಶಾಶ್ವತ ಪರಿಹಾರ ಸೂತ್ರ ಕಂಡುಕೊಳ್ಳಬೇಕು.
ಕಾವೇರಿ ನದಿ ಕಲ್ಮಶ ತಡೆಗಟ್ಟಲು ಯೋಜನೆ ರೂಪಿಸಬೇಕು. ರೈತರ ಭೂಮಿಯನ್ನು “ಸಿ ಮತ್ತು ಡಿ”ಗೆ ತಂದು ಸೆಕ್ಷನ್ ೪ರ ಅಡಿಯಲ್ಲಿ ಸರ್ವೆಗೆ ಮುಂದಾಗಿರುವ ಪ್ರಕ್ರಿಯೆಯನ್ನು ಕೈಬಿಟ್ಟು ಸಮಸ್ಯೆ ನಿವಾರಣೆ ಆಗುವವರೆಗೂ ನೊಂದ ರೈತರಿಗೆ ರೂ. ೨೫ ಸಾವಿರ ಮಾಸಾಶನ ಜಾರಿಗೊಳಿಸಬೇಕು. ಬಾಕಿ ಇರುವ ನಮೂನೆ ೫೦, ೫೩, ೫೭, ೯೪ ಸಿ ಹಾಗೂ ೯೪ ಸಿಸಿ ತುರ್ತಾಗಿ ವಿಲೇವಾರಿಗೊಳಿಸಲು ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಫಾಸ್ಟ್ ಟ್ರಾಕ್ ಸಮಿತಿ ರಚಿಸಬೇಕು. ಮಡಿಕೇರಿ ನಗರದ ನಿವೇಶನ ರಹಿತ ನಿವಾಸಿಗಳಿಗೆ ನಿವೇಶನ ಗುರುತಿಸಿ ವಸತಿ ಸೌಲ್ಯಭ್ಯ ಒದಗಿಸಬೇಕು. ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ರೂ. ೧೫ ಸಾವಿರ ಕೋಟಿ ಮೀಸಲಿಡಬೇಕು.
ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಲಾದ ೧೩೪ ಭರವಸೆಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಸಮಗ್ರವಾಗಿ ಈಡೇರಿಸುವ ಮೂಲಕ ಸರಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಅಮೀನ್ ಮೊಹಿಸಿನ್ ಒತ್ತಾಯಿಸಿದರು. ಮಡಿಕೇರಿ ಶಾಸಕರು ವಸತಿ ಸೇರಿದಂತೆ ಬಡವರ ಮೂಲಭೂತ ಹಕ್ಕುಗಳ ಕುರಿತು ಅಧಿವೇಶನದಲ್ಲಿ ಚರ್ಚಿಸದೆ
ಕಾಫಿ ತೋಟಗಳಲ್ಲಿ ಬಾಂಗ್ಲಾ ಕಾರ್ಮಿಕರಿದ್ದಾರೆ ಎಂದು ಜವಾಬ್ದಾರಿ ಮರೆತು ಮಾತನಾಡುತ್ತಿದ್ದಾರೆ ಎಂದು ಅಮೀನ್ ಟೀಕಿಸಿದರು.
ಮಡಿಕೇರಿ ನಗರದಲ್ಲಿ ತಲೆದೋರಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ನಗರಸಭೆಯ ಆಡಳಿತ ವಿಫಲವಾಗಿದೆ. ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸದಿದ್ದಲ್ಲಿ ಎಸ್‌ಡಿಪಿಐ ವತಿಯಿಂದ ನಗರಸಭೆಗೆ ಮುತ್ತಿಗೆ ಹಾಕಲಾಗುವುದು.
ಮಡಿಕೇರಿ ನಗರದ ಬಹುತೇಕ ರಸ್ತೆಯ ಎರಡು ಬದಿಗಳಲ್ಲಿ ಅಮೃತ್ ೨.೦ ನೀರಿನ ಪೈಪ್ ಅಳವಡಿಸಲು ಅಗೆಯಲಾಗಿದ್ದು, ನಗರ ಪೂರ್ತಿ ಧೂಳು ಆವರಿಸಿಕೊಂಡಿದೆ. ಇದರಿಂದ ಜನರು ಅನಾರೋಗ್ಯಕ್ಕೆ ಒಳಗಾಗುವ ಆತಂಕವಿದೆ. ಹೆಚ್ಚಿನ ರಸ್ತೆಗಳು ಸಂಚರಿಸಲು ಸಾಧ್ಯವಾಗದ ಸ್ಥಿತಿಯಲ್ಲಿವೆ. ಪೈಪ್ ಅಳವಡಿಸಿದ ನಂತರ ಡಾಂಬರೀಕರಣ ಮಾಡಿ ಜನರಿಗೆ ಅನುಕೂಲ ಕಲ್ಪಿಸಿಲ್ಲ.
ಆಡಳಿತ ಪಕ್ಷ ಕಳೆದ ಹತ್ತು ತಿಂಗಳಿನಲ್ಲಿ ಕೇವಲ ೪ ಸಾಮಾನ್ಯ ಸಭೆಯನ್ನು ನಡೆಸಿದೆ. ೪ ಸ್ಥಾಯಿ ಸಮಿತಿ ರಚನೆಯಾಗಿ ೨ ತಿಂಗಳಾದರೂ ಒಂದೇ ಒಂದು ಸಭೆ ಕರೆದಿಲ್ಲ.
ಸದಸ್ಯರ ಭಿನ್ನಾಭಿಪ್ರಾಯ, ಬಣ ರಾಜಕೀಯ ಮತ್ತು ಸ್ವಪ್ರತಿಷ್ಠೆಯಿಂದ ನಗರದ ಜನತೆ ಮೂಲ ಸೌಕರ್ಯದಿಂದ ವಂಚಿತರಾಗಿದ್ದಾರೆ. ಮಡಿಕೇರಿ ನಗರವು ಬಿ.ಜೆ.ಪಿ.ಯ ಆಡಳಿತ ಅವಧಿಗಿಂತ ಹೆಚ್ಚಾಗಿ ಜಿಲ್ಲಾಧಿಕಾರಿಯ ಆಡಳಿತ ಅವಧಿಯಲ್ಲಿ ಹೆಚ್ಚು ಅಭಿವೃದ್ಧಿ ಕಂಡಿದೆ ಎಂದು ಅಮೀನ್ ಮೊಹಿಸಿನ್ ಅಭಿಪ್ರಾಯಪಟ್ಟರು.
ಉಪಾಧ್ಯಕ್ಷ ಎಂ.ಕೆ. ಮನ್ಸೂರ್ ಆಲಿ ಮಾತನಾಡಿ, ಜಿಲ್ಲೆಯಲ್ಲಿ ಪಾಸ್ ಪೋರ್ಟ್ ಕಚೇರಿ ಆರಂಭಿಸಬೇಕು, ಮಳೆಹಾನಿ ಸಂತ್ರಸ್ತರಿಗಾಗಿ ನಿರ್ಮಿಸಿದ ಮನೆಗಳು ಪಾಳು ಬಿದ್ದಿದ್ದು, ಇವುಗಳನ್ನು ಬಡವರಿಗೆ ಹಂಚಿಕೆ ಮಾಡಬೇಕು. ಮಡಿಕೇರಿ ನಗರದಲ್ಲಿ ಮತ್ತೊಂದು ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ನಗರದ ಜಿಲ್ಲಾಸ್ಪತ್ರೆಯಲ್ಲಿ ಶಸ್ತç ಚಿಕಿತ್ಸೆಗಳು ನಡೆಯದೆ ಹಲವು ದಿನಗಳೇ ಕಳೆದಿದ್ದು, ಶಾಸಕರು ಹಾಗೂ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಪರಿಹಾರ ಸೂಚಿಸಬೇಕು. ಸಮಸ್ಯೆಗೆ ಕಾರಣಕರ್ತರಾದವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.
ಸದಸ್ಯ ಅಬ್ದುಲ್ ಅಡ್ಕಾರ್ ಮಾತನಾಡಿ, ಶಾಸಕ ಡಾ. ಮಂತರ್ ಗೌಡ ಅವರು ಸಂಘ ಪರಿವಾರದ ನೂರು ವರ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಧ್ವಂದ್ವ ನೀತಿ ಪ್ರದರ್ಶಿಸಿರುವುದು ಖಂಡನೀಯ.ಇವರು ಜನರ ಕ್ಷಮೆಯಾಚಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಮೇರಿ ವೇಗಸ್, ನಗರಾಧ್ಯಕ್ಷ ಮಹಮ್ಮದ್ ಅಲಿ ಹಾಗೂ ಸದಸ್ಯ ಅಬ್ದುಲ್ ಜಲೀಲ್ ಉಪಸ್ಥಿತರಿದ್ದರು.