ಮಡಿಕೇರಿ, ಫೆ. ೧೯: ತೀವ್ರವಾಗಿ ಹಲ್ಲೆಗೈದು ಸ್ನೇಹಿತನನ್ನು ಕೊಲೆ ಮಾಡಿದ ಆರೋಪ ದೃಢಪಟ್ಟ ಹಿನ್ನೆಲೆ ೧ನೇ ಅಧಿಕ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ನಾಲ್ಕು ಅಪರಾಧಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಜೊತೆಗಿದ್ದ ಸ್ನೇಹಿತ ಮಹದೇವನನ್ನು ಪಾಂಡವಪುರ ತಾಲೂಕಿನ ಗಿರೀಶ್, ಕಿರಣ್, ಅನಿಲ್ ಕುಮಾರ್, ಶಿವಕುಮಾರ್ ಅವರುಗಳು ಕೊಲೆಗೈದ ಹಿನ್ನೆಲೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.
ಏನಿದು ಘಟನೆ?
ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯ ಅವರೆದಾಳು ಗ್ರಾಮದ ಮಹದೇಶ್ವರ ಎಂಬವರು ಗುತ್ತಿಗೆ ಪಡೆದು ಕಟ್ಟಡ ನಿರ್ಮಿಸುವ ಕೆಲಸ ಮಾಡುತ್ತಿದ್ದು, ಕೆಲಸಗಾರರಾಗಿ ಗಿರೀಶ್, ಕಿರಣ್, ಅನಿಲ್, ಶಿವಕುಮಾರ್ ಹಾಗೂ ಮಹದೇವ ಸೇರಿಕೊಂಡಿದ್ದರು. ಇವರಿಗೆ ತೋಟದ ಲೈನ್‌ಮನೆಯಲ್ಲಿ ವಾಸಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದರು. ಕೆಲಸವಿದ್ದ ಸಂದರ್ಭ ಇವರೇ ಕರೆದೊಯ್ದು ಮರಳಿ ಮನೆಗೆ ತಂದು ಬಿಡುತ್ತಿದ್ದರು. ತಾ. ೧೭.೪.೨೦೨೩ ರಂದು ಗುತ್ತಿಗೆದಾರ ಮಹದೇಶ್ವರ ಮನೆಗೆ ತೆರಳಿ ನೋಡಿದಾಗ ತೀವ್ರ ಹಲ್ಲೆಯಾಗಿ ಮಹದೇವ ಸಾವನ್ನಪ್ಪಿರುವುದು ಕಂಡು ಬಂದಿದೆ. ಜೊತೆಗಿದ್ದ ಇತರರು ನಾಪತ್ತೆಯಾಗಿದ್ದಾರೆ. ಈ ಕುರಿತು ತಕ್ಷಣ ಪೊಲೀಸರಿಗೆ ಮಹದೇಶ್ವರ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿ ಮಹಜರು ನಡೆಸಿ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕ್ಷÄಲ್ಲಕ ಕಾರಣಕ್ಕೆ ಜಗಳ ತೆಗೆದು, ಗುದದ್ವಾರಕ್ಕೆ ಖಾರದ ಪುಡಿ ಸವರಿದ ದೊಣ್ಣೆಯನ್ನು ತುರುಕಿ, ತೀವ್ರವಾಗಿ ಹಲ್ಲೆ ಮಾಡಿರುವುದು ಗೊತ್ತಾಗಿದೆ. ಈ ಕುರಿತು ಅಂದಿನ ಪೊಲೀಸ್ ಇನ್ಸ್ಪೆಕ್ಟರ್ ನಾಗೇಶ್ ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದರು. ವಿಚಾರಣೆ ನಡೆಸಿದ ಮಡಿಕೇರಿಯ ೧ನೇ ಅಧಿಕ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಜಿ. ಸುರೇಂದ್ರ ಅವರು ಕೊಲೆ ಮಾಡಿದ ಅಪರಾಧಕ್ಕಾಗಿ ನಾಲ್ವರಿಗೂ ಕಠಿಣ ಜೀವಾವಧಿ ಶಿಕ್ಷೆ ಹಾಗೂ ತಲಾ ರೂ. ೧೦ ಸಾವಿರ ದಂಡ ವಿಧಿಸಿ ತೀರ್ಪು ಘೋಷಿಸಿದ್ದಾರೆ. ಇದರೊಂದಿಗೆ ಮೃತ ಮಹದೇವನ ಕುಟುಂಬಕ್ಕೆ ದಂಡದ ಹಣವನ್ನು ಪರಿಹಾರ ರೂಪದಲ್ಲಿ ನೀಡಬೇಕು. ಕಾನೂನು ಸೇವೆಗಳ ಪ್ರಾಧಿಕಾರಿ ಸೂಕ್ತ ಪರಿಹಾರ ನಿರ್ಧಾರಿಸಿ ನೀಡುವಂತೆ ಆದೇಶಿಸಿದ್ದಾರೆ. ಪ್ರಾಸಿಕ್ಯೂಷನ್ ಪರ ಸರಕಾರಿ ಅಭಿಯೋಜಕರಾದ ಎನ್.ಪಿ. ದೇವೇಂದ್ರ ವಾದ ಮಂಡಿಸಿದರು.