ಮಡಿಕೇರಿ, ಫೆ. ೧೮: ಕೊಡಗು ಜಿಲ್ಲೆಯವರಾದ ಕೊಕ್ಕಂಡ ರೋಶ್ನಿ ಅವರು ಸಿವಿಲ್ ಜಡ್ಜ್ ಆಗಿ ಆಯ್ಕೆಯಾಗಿದ್ದು, ಯುವ ಜನಾಂಗಕ್ಕೆ ಪ್ರೇರಣೆಯಾಗಿದ್ದಾರೆ.

ಮೂಲತಃ ಹಾತೂರು ಗ್ರಾಮದವರಾದ ರೋಶ್ನಿ ಅವರು ಮೈಸೂರಿನಲ್ಲಿ ನೆಲೆಸಿದ್ದು, ೨೦೨೫ರಲ್ಲಿ ಸಿವಿಲ್ ಜಡ್ಜ್ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ್ದು, ಇದೀಗ ರಾಜ್ಯಕ್ಕೆ ೫ನೇ ರ‍್ಯಾಂಕ್ ಪಡೆಯುವ ಮೂಲಕ ಸಿವಿಲ್ ಜಡ್ಜ್ ಆಗಿ ನಿಯುಕ್ತಿಗೊಳ್ಳುತ್ತಿದ್ದಾರೆ.

ತಮ್ಮ ಸಾಧನೆಯ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ರೋಶ್ನಿ ಅವರು, ಹಿಂಜರಿಕೆ, ಕೀಳರಿಮೆಯ ಮನೋಭಾವವನ್ನು ತ್ಯಜಿಸಿ ಸಾಧನೆ ಮಾಡಬೇಕೆಂಬ ಛಲದೊಂದಿಗೆ ಪ್ರಯತ್ನ ನಡೆಸಿದರೆ ಗುರಿ ಸಾಧಿಸಬಹುದೆಂದು ಕಿವಿಮಾತು ಹೇಳಿದರು. ವಿಶೇಷವಾಗಿ ಕೊಡವ ಜನಾಂಗದವರಿಗೆ ಮೀಸಲಾತಿಯಂತಹ ಸೌಲಭ್ಯಗಳಿಲ್ಲ. ಆದರೆ, ಬಹುತೇಕರು ಪ್ರತಿಭೆ ಇದ್ದರೂ ಮುಂದೆ ಬರಲು ಸಾಧ್ಯವಾಗದು ಎಂದು ಹಿಂಜರಿಯುತ್ತಿದ್ದಾರೆ.

ಆದರೆ ನಿರ್ದಿಷ್ಟ ಗುರಿ-ಸಾಧಿಸುವ ಹಂಬಲ ಹೊಂದಿದ್ದಲ್ಲಿ ಖಂಡಿತವಾಗಿಯೂ ಸಾಧನೆ ಮಾಡಬಹುದೆಂದು ಅಭಿಪ್ರಾಯಪಟ್ಟರು. ಆರಂಭದಲ್ಲಿ ತಮಗೂ ಹಿಂಜರಿಕೆ ಇತ್ತು. ನಂತರದಲ್ಲಿ ಇದನ್ನು ಬದಿಗೊತ್ತಿ ಕ್ರಿಯಾಶೀಲ ಪ್ರಯತ್ನ ನಡೆಸಿದ್ದು, ಈ ಸಾಧನೆಗೆ ಕಾರಣವಾಗಿದೆ ಎಂದು ಹಾಲಿ ೨೭ ವರ್ಷದವರಾದ ರೋಶ್ನಿ ಸಂತಸ ವ್ಯಕ್ತಪಡಿಸಿದರು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಕೊಡಗಿನವರು, ಕೊಡವ ಜನಾಂಗದವರು ಸರಕಾರಿ ಹುದ್ದೆಗಳ ನೇಮಕಾತಿಗೆ ಮುಂದೆ ಬರಬೇಕು, ಖಾಸಗಿ ಕ್ಷೇತ್ರದತ್ತ ತೋರುವ ಆಸಕ್ತಿಯನ್ನು ಸರಕಾರದ ಪ್ರಮುಖ ಹುದ್ದೆಗಳತ್ತಲೂ ತೋರಬೇಕಿದೆ. ಇದು ಈಗಿನ ಅಗತ್ಯವೂ ಆಗಿದೆ ಎಂದು ಅಭಿಪ್ರಾಯಪಟ್ಟರು.

ರೋಶ್ನಿ ಅವರ ಕುರಿತು..

ಹಾತೂರು ಗ್ರಾಮದವರಾದ ಕೊಕ್ಕಂಡ ಕಿರಣ್ ಬಿದ್ದಪ್ಪ ಹಾಗೂ ರೇಣು (ತವರುಮನೆ-ಚೆಯ್ಯಂಡ) ದಂಪತಿಯ ಪುತ್ರಿ ರೋಶ್ನಿ ೧೦ನೇ ತರಗತಿ ತನಕ ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ, ಶಿವಮೊಗ್ಗದಲ್ಲಿ ಪಿಯುಸಿ, ಮೈಸೂರಿನ ಜೆಎಸ್‌ಎಸ್ ಲಾ ಕಾಲೇಜಿನಲ್ಲಿ ಬಿಎಎಲ್‌ಎಲ್‌ಬಿ ಹಾಗೂ ಮಾಸ್ರ‍್ಸ್ (ಎಲ್‌ಎಲ್‌ಎಂ) ಅನ್ನು ಬೆಂಗಳೂರಿನ ಕ್ರೆöÊಸ್ಟ್ ಕಾಲೇಜಿನಲ್ಲಿ ಪೂರೈಸಿದ್ದಾರೆ.

ಕಳೆದ ವರ್ಷ ಸಿವಿಲ್ ಜಡ್ಜ್ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿದ್ದು, ಇದೀಗ ೨೭ನೆಯ ವಯಸ್ಸಿಗೆ ಈ ಜವಾಬ್ದಾರಿಯುತ ಹುದ್ದೆಗೆ ರಾಜ್ಯಕ್ಕೆ ಐದನೇ ರ‍್ಯಾಂಕ್‌ನ ಸಾಧನೆಯೊಂದಿಗೆ ನೇಮಕಗೊಂಡಿದ್ದಾರೆ. ಯಾರಲ್ಲೂ ಹಿಂಜರಿಕೆ-ಕೀಳರಿಮೆ ಬೇಡ ಎಂದು ಅವರು ಒತ್ತಿಹೇಳುವ ಮೂಲಕ ಯುವಜನಾಂಗಕ್ಕೆ ಪ್ರೇರಣೆಯಾಗಿದ್ದಾರೆ. ಪ್ರಸ್ತುತ ಇವರು ಮೈಸೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾನೂನು ಭದ್ರತಾ ಕೌನ್ಸಿಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. - ಶಶಿ