ಶನಿವಾರಸಂತೆ, ಫೆ. ೧೮: ರೈತರು ತೇಗದ ಮರದ ತುಂಡುಗಳನ್ನು ದಾನ ಮಾಡಿದರೆ ಜಾತ್ರಾ ಸಮಿತಿ ರಥ ನಿರ್ಮಾಣ ಮಾಡಿ ಮುಂದಿನ ವರ್ಷದ ಜಾತ್ರೆಯಲ್ಲಿ ರಥವನ್ನು ಎಳೆಯುವಂತಾದರೆ ರಥೋತ್ಸವದೊಂದಿಗೆ ಗುಡುಗಳಲೆ ಶ್ರೀ ಜಯದೇವ ಜಾನುವಾರು ಜಾತ್ರೆಗೆ ಮೆರುಗು ಬಂದು ಗತವೈಭವ ಮರುಕಳಿಸಬಹುದು ಎಂದು ಕೊಡ್ಲಿಪೇಟೆ ಕಲ್ಲುಮಠದ ಮಹಾಂತ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಹಂಡ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ ಸಹಕಾರದಲ್ಲಿ ನಡೆದ ಗುಡುಗಳಲೆ ಶ್ರೀ ಜಯದೇವ ಜಾನುವಾರುಗಳ ಜಾತ್ರೆ ಮುಕ್ತಾಯ ಸಮಾರಂಭವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ವೈಜ್ಞಾನಿಕ ಬದಲಾವಣೆಯಿಂದಾಗಿ ಮನುಷ್ಯನ ಕಾಯಕ ಕಡಿಮೆಯಾಗಿ, ನೇಗಿಲ ವ್ಯವಸ್ಥೆ ಮಾಯವಾಗಿ, ಬೆರಳೆಣಿಕೆಯ ಜಾನುವಾರುಗಳು ಜಾತ್ರೆಗೆ ಬರುತ್ತಿದ್ದು, ಜಾತ್ರೆಯ ಆಕರ್ಷಣೆಯಾಗಿ ಮನೋರಂಜನಾ ಪ್ರದರ್ಶನಗಳು ಜನಮನ ರಂಜಿಸುತ್ತಿವೆ. ವಿದ್ಯಾಭ್ಯಾಸದ ನೆವದಲ್ಲಿ ಮಕ್ಕಳು ನಗರ ಸೇರಿದರೆ, ತಂದೆ-ತಾಯಿ ವೃದ್ಧಾಶ್ರಮ ಸೇರುತ್ತಿದ್ದಾರೆ. ರೈತ ಪಶುಪಾಲನೆಯತ್ತ, ಬೆಳೆ ಬೆಳೆಯುವತ್ತ ಗಮನ ಹರಿಸಬೇಕು. ಜಾತ್ರಾ ಮೈದಾನದಲ್ಲಿ ಗಿಡಮರಗಳನ್ನು ನೆಡದಿದ್ದರೆ ಮುಂದೊAದು ದಿನ ಆಮ್ಲಜನಕ ಉತ್ಪತ್ತಿ ಮಾಡುವ ಕಾರ್ಖಾನೆ ಪ್ರಾರಂಭಿಸಬೇಕಾಗಬಹುದು ಎಂದು ವಿಷಾದ ವ್ಯಕ್ತಪಡಿಸಿದರು.

ಸಾನಿಧ್ಯ ವಹಿಸಿದ್ದ ಕಲ್ಲಳ್ಳಿಮಠದ ರುದ್ರಮುನಿ ಸ್ವಾಮೀಜಿ ಆಶೀರ್ವಚನ ನೀಡುತ್ತಾ, ಜಾತ್ರಾ ಸಮಿತಿ ಜಾತ್ರಾ ಮೈದಾನದ ಅಭಿವೃದ್ಧಿಯ ಸಂದರ್ಭ ಶಿಥಿಲಾವಸ್ಥೆಯಲ್ಲಿರುವ ವಸ್ತು ಪ್ರದರ್ಶನ ಕಟ್ಟಡವನ್ನು ದುರಸ್ತಿಪಡಿಸಬೇಕು. ಹಸಿರು ಕಾಣದ ಮೈದಾನದಲ್ಲಿ ಗಿಡನೆಡುವ ಕಾಯಕದೊಂದಿಗೆ ಪಂಚಾಯಿತಿ ಸಿಬ್ಬಂದಿ ನೀರುಣಿಸಬೇಕು. ಅರಳಿಮರಗಳನ್ನು ನೆಡುವ ಮೂಲಕ ಆಮ್ಲಜನಕದ ಕೊರತೆ ನೀಗಬಹುದು. ಜಾನಪದ ಸಂಸ್ಕೃತಿ ಬಿಂಬಿಸುವ ಜಾತ್ರೆ ಜನಗಳ ಜಾತ್ರೆಯಾಗಿಯಾದರೂ ಮುಂದುವರೆಯಲಿ ಎಂದು ಶುಭ ಹಾರೈಸಿದರು.

ಜಾತ್ರಾ ಸಮಿತಿ ಕಾರ್ಯದರ್ಶಿ ಎಚ್.ಎಂ. ವಿನಿತ್ ಕುಮಾರ್ ಮಾತನಾಡಿ, ಗುಡುಗಳಲೆ ಶ್ರೀ ಜಯದೇವ ಜಾನುವಾರು ಜಾತ್ರೆ ಜಾನುವಾರುಗಳ ಕೊರತೆಯ ನಡುವೆಯೂ ಸಾಂಸ್ಕೃತಿಕ ಕಾರ್ಯಕ್ರಮ, ಹೊನಲು ಬೆಳಕಿನ ಕ್ರೀಡಾಕೂಟ ಹಾಗೂ ಮನೋರಂಜನಾ ಪ್ರದರ್ಶನಗಳಿಂದ ಜನಾಕರ್ಷಣೆಯ ಜಾತ್ರೆಯಾಗಿ ಯಶಸ್ವಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಧಾ ಹಿರೇಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ್, ಮಾಜಿ ಅಧ್ಯಕ್ಷೆ ಲಕ್ಷಿö್ಮ ಶೆಟ್ರು ಹಾಗೂ ಮುಖಂಡ ಕುಶಾಲಪ್ಪ ಮಾತನಾಡಿ, ಜಾತ್ರೆಯ ಇತಿಹಾಸ ಮೆಲುಕು ಹಾಕುವಂತದ್ದು. ಮೂಲಭೂತ ಸೌಕರ್ಯಗಳ ಕೊರತೆ ನೀಗಬೇಕು. ಸಮಸ್ಯೆಗಳನ್ನು ಒಗ್ಗಟ್ಟಿನಿಂದ ಪರಿಹರಿಸಿ, ತೇಗದ ಮರದ ತುಂಡುಗಳನ್ನು ದಾನ ಮಾಡುವುದರೊಂದಿಗೆ ಮುಂದಿನ ಜಾತ್ರೆಯಲ್ಲಿ ರಥೋತ್ಸವದೊಂದಿಗೆ ಜಾತ್ರೆ ಆಚರಿಸಲು ಪ್ರಯತ್ನಿಸಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಾತ್ರಾ ಸಮಿತಿ ಅಧ್ಯಕ್ಷೆ ಎಂ.ಎಸ್. ಚೈತ್ರಾ ಮಾತನಾಡಿ, ಜಾತ್ರಾ ಮಹೋತ್ಸವ ಯಶಸ್ವಿಯಾಗಿ ಮುಕ್ತಾಯ ಕಾಣಲು ಸಹಕರಿಸಿದ ಜಾತ್ರಾ ಸಮಿತಿ, ಸಲಹಾ ಸಮಿತಿ ಹಾಗೂ ಪಂಚಾಯಿತಿ ಸದಸ್ಯರ ಸಹಕಾರವನ್ನು ಸ್ಮರಿಸಿದರು.

ಸಮಾರಂಭದಲ್ಲಿ ಜಾತ್ರೆಗೆ ಆಗಮಿಸಿದ್ದ ಉತ್ತಮ ರಾಸುಗಳಿಗೆ ಹಾಗೂ ವಸ್ತು ಪ್ರದರ್ಶನದ ಉತ್ತಮ ಫಲವಸ್ತುಗಳಿಗೆ ಹಾಗೂ ಮಾದರಿಗಳಿಗೆ ಬಹುಮಾನ ನೀಡಿ ಸನ್ಮಾನಿಸಿ, ಗೌರವಿಸಲಾಯಿತು. ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಶೋಕ್, ಸದಸ್ಯರಾದ ವೀರೇಂದ್ರಕುಮಾರ್, ಬಸವರಾಜ್, ಮಹದೇವಮ್ಮ, ರೂಪಾ, ಸುವರ್ಣ, ಪಿಡಿಓ ಅಂಜನಾದೇವಿ, ಜಾತ್ರಾ ಸಮಿತಿ ಉಪಾಧ್ಯಕ್ಷ ಬಸವಯ್ಯ, ಉಪ ಕಾರ್ಯದರ್ಶಿ ಉಷಾ, ಸದಸ್ಯರು, ಸಲಹಾ ಸಮಿತಿ ಸದಸ್ಯರು, ದುಂಡಳ್ಳಿ-ನಿಡ್ತ ಗ್ರಾಮ ಪಂಚಾಯಿತಿಗಳ ಮಾಜಿ ಅಧ್ಯಕ್ಷರುಗಳಾದ ಭವಾನಿ ಗುರು, ಅಶೋಕ್, ವೃತ್ತ ನಿರೀಕ್ಷಕ ಜಿ. ಕೃಷ್ಣರಾಜ್, ಸಿಬ್ಬಂದಿ, ಸೋಮಶೇಖರ್, ಜಗದೀಶ್ ಇತರ ಮುಖಂಡರು ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು. ಸುಪ್ರಜಾ ಗುರುಕುಲ ಅಧ್ಯಕ್ಷೆ ಸುಜಲಾದೇವಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.