ಮಡಿಕೇರಿ, ಫೆ. ೧೯: ಅರೆಭಾಷೆ ಗೌಡ ಸಮುದಾಯದ ಅಭಿವೃದ್ಧಿಗೆ ಕಾಟಕೇರಿ ಬಳಿಯಲ್ಲಿ ೬ ಎಕರೆ ಜಾಗವನ್ನು ಸರಕಾರ ಮಂಜೂರು ಮಾಡಿದ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರನ್ನು ಕೊಡಗು ಗೌಡ ಸಮಾಜದ ಪ್ರಮುಖರ ನಿಯೋಗ ಭೇಟಿಯಾಗಿ ಗೌರವಾರ್ಪಣೆ ಸಲ್ಲಿಸಿತು.
ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ನೇತೃತ್ವದಲ್ಲಿ ಭೇಟಿಯಾಗಿ ಗೌರವಿಸಲಾಯಿತು.
ಇತ್ತೀಚೆಗೆ ಬೆಂಗಳೂರಿನಲ್ಲಿ ಜರುಗಿದ ಅರೆಭಾಷೆ ಗೌಡ ಸಮುದಾಯದ ಕಾರ್ಯಕ್ರಮದಲ್ಲಿ ನೀಡಿದ ಭರವಸೆಯಂತೆ ಮುಖ್ಯಮಂತ್ರಿಗಳು, ಅರೆಭಾಷೆ ಗೌಡ ಸಮುದಾಯದ ಸಂಸ್ಕೃತಿ, ಶೈಕ್ಷಣಿಕ ಮತ್ತು ಕ್ರೀಡಾ ಕೇಂದ್ರ ಸ್ಥಾಪನೆ ಉದ್ದೇಶಕ್ಕಾಗಿ, ಮಡಿಕೇರಿ ತಾಲೂಕು ಮದೆ ಗ್ರಾಮದ ಕಾಟಕೇರಿ ಬಳಿ ೬ ಎಕರೆ ಜಾಗ ಮಂಜೂರು ಮಾಡಲು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದ್ದರು. ಅಲ್ಲದೆ ಜಮ್ಮಾ ಬಾಣೆ ಸಮಸ್ಯೆ ಪರಿಹಾರಕ್ಕಾಗಿ, ಕರ್ನಾಟಕ ರಾಜ್ಯ ಕಂದಾಯ ಮಸೂದೆ ೨೦೨೫ ರ ತಿದ್ದುಪಡಿ ವಿದೇಯಕಕ್ಕೆ ಅನುಮೋದನೆ ನೀಡಿರುವುದಕ್ಕಾಗಿ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರನ್ನು ಭೇಟಿ ಮಾಡಿ ಗೌರವಾರ್ಪಣೆ ಸಲ್ಲಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಅರೆಭಾಷೆ ಗೌಡ ಸಮುದಾಯದ ಪ್ರಮುಖರಾದ ಕೊಲ್ಯದ ಗಿರೀಶ್, ಸೂರ್ತಲೆ ಸೋಮಣ್ಣ, ಪುಳಕಂಡ ಸಂದೀಪ್, ಕಾಳೇರಮ್ಮನ ನಂದ, ಪೊನ್ನಚ್ಚನ ಮಧು, ಕೊಂಬನ ಪ್ರವೀಣ್, ನಂಗಾರು ನಾಣಯ್ಯ, ಪಾಣತ್ತಲೆ ಪಳಂಗಪ್ಪ, ಪೈಕೇರ ಮನೋಹರ್, ಆಮೆ ಸೀತಾರಾಮ್, ಪೇರಿಯನ ಘನ ಶ್ಯಾಮ್, ಮೂಲೆಮಜಲು ಅಮಿತ, ಚೊಕ್ಕಾಡಿ ಪ್ರೇಮ ರಾಘವಯ್ಯ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.