ಪೊನ್ನಂಪೇಟೆ, ಫೆ. ೧೭: ಕಳೆದ ವರ್ಷದ ಮಹಾಶಿವರಾತ್ರಿ ಸಮಯದಲ್ಲಿ ಪೊನ್ನಂಪೇಟೆ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಪೂಜೆಗೆ ಬಂದಿದ್ದ ಮಹಿಳೆಯೊಬ್ಬರು ಕಳೆದುಕೊಂಡಿದ್ದ ಚಿನ್ನದ ಬ್ರೇಸ್‌ಲೆಟ್ ಅನ್ನು ಈ ವರ್ಷ ಶಿವರಾತ್ರಿಯ ಸಮಯದಲ್ಲಿ ದೇವಸ್ಥಾನದ ಅರ್ಚಕರೊಬ್ಬರು ಹಿಂದಿರುಗಿಸಿ ಪ್ರಾಮಾಣಿಕತೆ ತೋರಿದ್ದಾರೆ.

ಪೊನ್ನಂಪೇಟೆ ಸಮೀಪದ ಜೋಡುಬೀಟಿ ಗ್ರಾಮದ ಹೆಚ್. ಬಿ. ಕಮಲ ಎಂಬ ಮಹಿಳೆ ಕಳೆದ ವರ್ಷ ಪೂಜೆಗೆಂದು ದೇವಸ್ಥಾನಕ್ಕೆ ಬಂದಿದ್ದರು. ಆ ಸಂದರ್ಭ ಮಹಿಳೆಯ ಮೊಮ್ಮಗಳ ಕೈಯಲ್ಲಿದ್ದ ಚಿನ್ನದ ಬ್ರೇಸ್‌ಲೆಟ್ ದೇವಸ್ಥಾನದ ಮುಂಭಾಗ ಚಪ್ಪಲಿ ಬಿಡುವ ಸ್ಥಳದಲ್ಲಿ ಕಳೆದುಹೋಗಿತ್ತು.

ತನ್ನ ಮೊಮ್ಮಗಳ ಕೈಯಲ್ಲಿ ಆಭರಣ ಇಲ್ಲದೇ ಇರುವುದು ಗಮನಕ್ಕೆ ಬಂದು, ಕಮಲ ಅವರು, ಮೊಮ್ಮಗಳಿಗೆ ಬೈಯುತ್ತಿದ್ದರು. ಇದನ್ನು ಗಮನಿಸಿದ ಅರ್ಚಕ ಪಂಚಾಕ್ಷರಿ ಅವರು ಚಿಕ್ಕ ಮಗು ಅದಕ್ಕೆ ಏನು ಗೊತ್ತಾಗುತ್ತೆ ಹೊಡೆಯಬೇಡಿ ಎಂದು ಆ ಮಹಿಳೆಗೆ ತಿಳಿ ಹೇಳಿದ್ದರು.

ಮಹಿಳೆ ದೇವಸ್ಥಾನದಿಂದ ತೆರಳಿ ಸ್ವಲ್ಪ ಸಮಯದ ನಂತರ ಅರ್ಚಕರು ಹೊರಬಂದು ನೋಡಿದಾಗ, ಚಪ್ಪಲಿ ಸ್ಟಾö್ಯಂಡ್ ಬಳಿ ಚಿನ್ನದ ಬ್ರೇಸ್‌ಲೆಟ್ ಕಂಡು, ಅದನ್ನು ತೆಗೆದುಕೊಂಡು, ಈ ವಿಷಯವನ್ನು ವಾಟ್ಸಾö್ಯಪ್ ಗ್ರೂಪ್‌ಗಳಲ್ಲಿ ಹಂಚಿಕೊAಡಿದ್ದರು. ಆದರೆ ಕಳೆದುಕೊಂಡವರಿಗೆ ಮಾಹಿತಿ ತಿಳಿಯದ ಕಾರಣ ಅದನ್ನು ಪಡೆದುಕೊಂಡಿರಲಿಲ್ಲ.

ಒAದು ವರ್ಷದ ನಂತರ ಅದೇ ಮಹಿಳೆ ಕಮಲ ಅವರು ಮಹಾಶಿವರಾತ್ರಿ ಮಾರನೇ ದಿನ ತಾ. ೧೬ ರಂದು ತನ್ನ ಮೊಮ್ಮಗಳ ಜೊತೆಗೆ ದೇವಸ್ಥಾನಕ್ಕೆ ಬಂದ ಸಂದರ್ಭ, ಆ ಮಗುವನ್ನು ಗುರುತು ಹಿಡಿದ ಅರ್ಚಕ ಪಂಚಾಕ್ಷರಿ ಅವರು, ಕಳೆದ ವರ್ಷದ ಘಟನೆ ಬಗ್ಗೆ ವಿಚಾರಿಸಿ, ವಿವರ ಪಡೆದು, ಅದು ಅವರದ್ದೆ ಎಂದು ಖಾತ್ರಿಪಡಿಸಿಕೊಂಡ ನಂತರ ಅದನ್ನು ಹಿಂದಿರುಗಿಸಿದ್ದಾರೆ.

ಒಂದು ವರ್ಷದ ಹಿಂದೆ ಬಿದ್ದು ಸಿಕ್ಕಿದ ಚಿನ್ನದ ಆಭರಣವನ್ನು, ಜೋಪಾನಮಾಡಿ, ಕಳೆದುಕೊಂಡವರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಅರ್ಚಕ ಪಂಚಾಕ್ಷರಿ ಅವರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- ಚನ್ನನಾಯಕ