ನಾಪೋಕ್ಲು, ಫೆ.೧೬: ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿಯ ಕೊನೆಯ ಸಾಮಾನ್ಯ ಸಭೆ ಪಂಚಾಯಿತಿ ಅಧ್ಯಕ್ಷರಾದ ಕುಶನ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಓ)ಚಂದ್ರಮೌಳಿ ಮಾತನಾಡಿ, ಪ್ರಸ್ತುತ ಅವಧಿಯಲ್ಲಿ ಸಮಾಜಮುಖಿ ಕಾರ್ಯಗಳು ನಡೆದಿವೆ, ಸಾರ್ವಜನಿಕರಿಗೆ ಉಪಯೋಗವಾಗುವಂತಹ ಕೆಲಸಗಳಿಗೆ ಆದ್ಯತೆ ನೀಡಿದ್ದೇವೆ ಎಂದು ಹೇಳಿದರು.
ಪಂಚಾಯಿತಿಯ ಕಸವಿಲೇವಾರಿ ಘಟಕ, ಶುದ್ಧ ಕುಡಿಯುವ ನೀರು, ಸಮುದಾಯ ಭವನ ನವೀಕರಣ, ಕಾಂತೂರು ಮತ್ತು ಕಿಗ್ಗಾಲು ಹಿಂದೂ ರುದ್ರ ಭೂಮಿ ಅಭಿವೃದ್ಧಿ ಹಾಗೂ ಸಮಯಕ್ಕೆ ಸರಿಯಾಗಿ ವರ್ಷದಲ್ಲಿ ಮೂರು ಬಾರಿ ಚರಂಡಿ ಮತ್ತು ನಗರದ ಸುತ್ತಮುತ್ತ ಕಾಡು ಕಡೆದು ಸ್ವಚ್ಛಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪಂಚಾಯಿತಿ ಅಧ್ಯಕ್ಷರಾದ ಕುಶನ್ ರೈ ಮಾತನಾಡಿ, ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ ಆಡಳಿತದ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಮಾಜಿ ಉಪಾಧ್ಯಕ್ಷರಾದ ವಿಜು ತಿಮ್ಮಯ್ಯ ಮಾತನಾಡಿ, ಆಡಳಿತ ಮಂಡಳಿಯ ಸದಸ್ಯರನ್ನು ಶ್ಲಾಘಿಸಿದರು. ಉಪಾಧ್ಯಕ್ಷರಾದ ರೇಖಾ ಬಿ ಎಸ್ ಹಾಗೂ ಇತರರು ಹಾಜರಿದ್ದರು.