ಕೂಡಿಗೆ, ಫೆ. ೧೬: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕಾವೇರಿ ನದಿ ಮತ್ತು ಹಾರಂಗಿ ನದಿಗಳಲ್ಲಿ ನೀರಿನ ಹರಿಯುವಿಕೆಯ ಮಟ್ಟದಲ್ಲಿ ಕುಸಿತವಾಗಿದೆ. ಈ ಹಿನ್ನೆಲೆ, ನದಿಯ ನೀರಿನ ಮೂಲವನ್ನೇ ಅವಲಂಬಿಸಿರುವ ಕೆಲ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ, ಕುಡಿಯುವ ನೀರಿನ ಸಮಸ್ಯೆಗಳು ಬರದ ಹಾಗೆ ಮುಂಜಾಗ್ರತಾ ಕ್ರಮಗಳನ್ನು ವಹಿಸಿಕೊಳ್ಳುವಂತೆ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್ವರ ಕುಮಾರ್ ಸೂಚನೆ ನೀಡಿದ್ದಾರೆ.

ಕೂಡಿಗೆಯಲ್ಲಿ ನಡೆದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕುಡಿಯುವ ನೀರಿನ ಸರಬರಾಜು ಮಾಡುವ ನೀರು ಗಂಟಿಗಳ ಸಭೆಯಲ್ಲಿ ಈ ಸೂಚನೆ ನೀಡಿದ್ದು, ಕೊಳವೆ ಬಾವಿಯಿಂದ ಬರುವ ಅಂತರ್ಜಲದ ನೀರಿನ ಬಗ್ಗೆ ಸೇರಿದಂತೆ ಗ್ರಾಮೀಣಾಭಿವೃದ್ಧಿ ಕುಡಿಯುವ ನೀರು ಸರಬರಾಜು ಯೋಜನೆ ಅಡಿಯಲ್ಲಿ ಸರಬರಾಜು ಆಗುತ್ತಿರುವ ನೀರಿನ ಮಿತ ಬಳಕೆಗೆ ಸೂಚಿಸಿದರು.

ಬೇಸಿಗೆಯು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆಯಾ ಗ್ರಾಮ ಪಂಚಾಯಿತಿ ಅಧಿಕಾರಿ ವರ್ಗದವರು ನೀರು ಸರಬರಾಜು ವ್ಯವಸ್ಥೆಗೆ ಸಂಬAಧಿಸಿದAತೆ ಸಭೆ ಸೇರಿ ಕೈಗೊಳ್ಳಬೇಕಾದ ಅಗತ್ಯತೆಗಳ ಬಗ್ಗೆ ಚರ್ಚಿಸಿ ಕುಡಿಯುವ ನೀರಿನ ಸಮಸ್ಯೆಗಳು ಬಾರದಂತೆ ನಿರ್ವಹಣೆ ಮಾಡಲು ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಕುಶಾಲನಗರ ತಾಲೂಕು ವ್ಯಾಪ್ತಿಯ ಅಭಿವೃದ್ಧಿ ಅಧಿಕಾರಿ ವರ್ಗದವರು ಹಾಜರಿದ್ದರು.