ಶನಿವಾರಸಂತೆ, ಫೆ.೧೬: ದುಂಡಳ್ಳಿ ಗ್ರಾಮ ಪಂಚಾಯಿತಿಯ ಗ್ರಂಥಾಲಯ ಜಿಲ್ಲೆಯಲ್ಲಿ ಗುರುತಿಸಿಕೊಂಡು ರಾಜ್ಯಪ್ರಶಸ್ತಿ ಪಡೆದಿರುವುದು ಮೇಲ್ವಿಚಾರಕರ ಕ್ರಿಯಾಶೀಲತೆಯೇ ಕಾರಣ ಎಂದು ಪಂಚಾಯಿತಿ ಅಧ್ಯಕ್ಷೆ ಭವಾನಿ ಗುರುಪ್ರಸನ್ನ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯ ಅರಿವು ಕೇಂದ್ರದ ವತಿಯಿಂದ ಗ್ರಂಥಾಲಯ ಸಲಹಾ ಸಮಿತಿ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರಿಗಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಂಥಾಲಯ ಕಿರಿದಾದ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದುದನ್ನು ಮನಗಂಡು ಗ್ರಾಮ ಪಂಚಾಯಿತಿ ಹಾಗೂ ಶಾಸಕರ ನಿಧಿಯಿಂದ ರೂ.೨ ಲಕ್ಷ ವೆಚ್ಚದಲ್ಲಿ ಕಟ್ಟಡ ವಿಸ್ತರಿಸಿ ಅಭಿವೃದ್ಧಿಪಡಿಸಲಾಗಿದೆ ಎಂದರು.

ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಕೆ.ಪಿ ಜಯಕುಮಾರ್ ಮಾತನಾಡಿ, ಪ್ರತಿಯೊಬ್ಬರು ತಾವು ಮಾಡುವ ಕಾರ್ಯ ಹಾಗೂ ತಮ್ಮ ಜವಾಬ್ದಾರಿಯ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಂಡರೆ ತಮ್ಮ ಕಾರ್ಯ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸಾಧ್ಯ. ಗ್ರಾಮ ಪಂಚಾಯಿತಿಯ ಗ್ರಂಥಾಲಯವನ್ನು ಅಭಿವೃದ್ಧಿಪಡಿಸಿ ಓದುಗರ ಸಂಖ್ಯೆಯನ್ನು ಹೆಚ್ಚಿಸಿಕೊಂಡು, ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ರಾಜ್ಯ ಪ್ರಶಸ್ತಿ ಪಡೆದುಕೊಂಡಿರುವ ಗ್ರಂಥಾಲಯದ ಮೇಲ್ವಿಚಾರಕಿ ದಿವ್ಯಾ ಇತರರಿಗೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯಿಷಾ ಮಾತನಾಡಿ, ಗ್ರಂಥಾಲಯದಲ್ಲಿ ಮೇಲ್ವಿಚಾರಕಿ ದಿವ್ಯಾ ಸಲಹಾ ಸಮಿತಿ ರಚಿಸಿಕೊಂಡು ಸರ್ಕಾರಿ ಕಾರ್ಯಕ್ರಮಗಳನ್ನು ಉತ್ತಮವಾಗಿ ಆಚರಿಸುವ ಮೂಲಕ ಗ್ರಂಥಾಲಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಕಟ್ಟಡ ವಿಸ್ತಾರವಾಗಿದ್ದು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕ ಓದುಗರನ್ನು ಸೆಳೆಯುತ್ತಿದೆ ಎಂದರು.

ಗ್ರAಥಾಲಯ ಮೇಲ್ವಿಚಾರಕಿ ಎಸ್.ಪಿ ದಿವ್ಯಾ ಪ್ರಾಸ್ತಾವಿಕ ನುಡಿಯಾಡಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ಜೆ ಗಿರೀಶ್, ಪೂರ್ಣಿಮಾ ಕಿರಣ್, ಸಲಹಾ ಸಮಿತಿ ನಿರ್ದೇಶಕ ಬಿ.ಬಿ ನಾಗರಾಜ್ ಮಾತನಾಡಿದರು. ಪಂಚಾಯಿತಿ ಉಪಾಧ್ಯಕ್ಷೆ ಗೋಪಿಕಾ, ಸದಸ್ಯರಾದ ಡಿ.ಪಿ ಬೋಜಪ್ಪ, ಮನು ಮಹಾಂತೇಶ್, ದೇವರಾಜ್, ಎಸ್.ಪಿ ಭಾಗ್ಯಾ, ಜಾನಕಿ, ನಂದಿನಿ, ವಿಘ್ನೇಶ್ವರ ಪ್ರೌಢಶಾಲಾ ಮುಖ್ಯಶಿಕ್ಷಕಿ ಸುಚಿತ್ರಾ, ಪತ್ರಕರ್ತೆ ನಯನತಾರಾ, ಮಂಜುಳಾ, ಗುರು, ಚಂದ್ರಕಲಾ, ಸಲಹಾ ಸಮಿತಿ ನಿರ್ದೇಶಕ ಪ್ರಕಾಶ್ಚಂದ್ರ, ಪತ್ರಕರ್ತರಾದ ಸುರೇಶ್, ಹರೀಶ್ ಕುಮಾರ್, ದಿನೇಶ್ ಹಾಗೂ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.