ಕುಶಾಲನಗರ, ಫೆ. ೧೬: ಕುಶಾಲನಗರ ಯೋಗಾನಂದ ಬಡಾವಣೆ ಶ್ರೀ ಮುತ್ತಪ್ಪ ಸ್ವಾಮಿ ದೇವಾಲಯದಲ್ಲಿ ತೆರೆ ಮಹೋತ್ಸವ ಭಕ್ತಿ ಭಾವದಿಂದ ನಡೆಯಿತು.

ತೆರೆಯ ಅಂಗವಾಗಿ ದೇವಾಲಯದಲ್ಲಿ ಗಣಪತಿ ಹೋಮ, ಧ್ವಜಾರೋಹಣ, ಮುತ್ತಪ್ಪನ ಮಲೈ ಇರಕ್ಕಲ್, ಮುತ್ತಪ್ಪನ್ ವೆಳ್ಳಾಟಂ ನಡೆದು ಸಾವಿರಾರು ಭಕ್ತರು ಮುತ್ತಪ್ಪನ ದರ್ಶನವನ್ನು ಪಡೆದರು. ಕುಶಾಲನಗರ ದೇವಾಲಯ ಒಕ್ಕೂಟದ ಪ್ರತಿನಿಧಿಗಳು ಸಾಮೂಹಿಕ ಪೂಜೆ ಸಲ್ಲಿಸಿದರು.

ಬಳಿಕ ಸಂಜೆ ನಗರದ ಅಯ್ಯಪ್ಪ ದೇವಾಲಯದಿಂದ ತಾಲಪೋಲಿ ಮೆರವಣಿಗೆ ನಡೆಯಿತು. ವಾಹನದಲ್ಲಿ ಮುತ್ತಪ್ಪ ದೈವ ಪ್ರತಿಮೆಯನ್ನು ನೂರಾರು ಮಹಿಳೆಯರು ದೀಪಗಳ ಜೊತೆಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು. ಕೇರಳದ ಚಂಡೆ, ಪಟಾಕಿ ಸಿಡಿಮದ್ದುಗಳ ಪ್ರದರ್ಶನ ನೆರೆದಿದ್ದ ಭಕ್ತರ ಮನಸೂರೆಗೊಂಡಿತು.

ದೇವಾಲಯದ ಮುಂಭಾಗದ ಕಲಾ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ತೆರೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರಿಗೆ ದೇವಾಲಯ ಸೇವಾ ಟ್ರಸ್ಟ್ ವತಿಯಿಂದ ಅನ್ನದಾನ, ಪ್ರಸಾದ ನೀಡಲಾಯಿತು. ರಾತ್ರಿ ಕಳಿಗಪಾಟು ನಂತರ ಕಳಸ ಆಗಮನ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಶ್ರೀ ಮುತ್ತಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಕೆ.ವರದ, ಉತ್ಸವ ಸಮಿತಿ ಅಧ್ಯಕ್ಷರಾದ ಎಂ.ಡಿ ರಂಜಿತ್ ಕುಮಾರ್, ಉಪಾಧ್ಯಕ್ಷರಾದ ವಿಮಲ್ ನಾಯರ್, ಸಂಚಾಲಕರಾದ ಮಣಿಕಂಠನ್, ರಾಜೇಶ್, ಟಿ.ಎನ್ ವಿನು, ಕಮಲ್, ಸಂದೀಪ್ ಸಿ.ಆರ್ ನರೇಶ್ ಕುಮಾರ್, ಮಾಜಿ ಅಧ್ಯಕ್ಷರಾದ ವರದ, ಮತ್ತಿತರರು ಇದ್ದರು.