*ಗೋಣಿಕೊಪ್ಪ, ಫೆ.೧೪: ಶಿಕ್ಷಣಕ್ಕೆ ಮಾತ್ರ ಬದುಕಿನ ಕಷ್ಟಗಳನ್ನು ಕರಗಿಸುವ ಶಕ್ತಿ ಇರುವುದು ಎಂದು ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಪರಹಿತನಂದಾ ಮಹಾರಾಜ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಸ್ವಾಮಿ ಸಂಭವನAದಾ ಸಭಾಂಗಣದಲ್ಲಿ, ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಶಾಲಾ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವತಿಯಿಂದ ಎಸ್.ಎಸ್.ಎಲ್.ಸಿ ಕಲಿಕೆಯಲ್ಲಿರುವ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಹೊಂದಲು ಆಯೋಜಿಸಿದ್ದ ‘ಪ್ರೇರಣ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಬಗ್ಗೆ ಆತ್ಮವಿಶ್ವಾಸ ಬೆಳೆಸಿಕೊಂಡಾಗ ಪರೀಕ್ಷೆಯ ಭಯ ತೊಡೆದುಹೋಗುತ್ತದೆ. ಸಮಯದ ಪರಿಮಿತಿಯ ಅರಿವು, ಓದುವ ಶಿಸ್ತು ಮೈಗೂಡಿಸಿಕೊಂಡಾಗ ಹೆಚ್ಚಿನ ಫಲಿತಾಂಶ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕಳೆದುಹೋದ ಸಮಯಗಳ ಬಗ್ಗೆ ಚಿಂತೆ ಮಾಡದೆ ಇರುವ ಅಲ್ಪ ಸಮಯವನ್ನೇ ಪ್ರಾಮಾಣಿಕ ಪ್ರಯತ್ನಗಳೊಂದಿಗೆ ಜೋಡಿಸಿಕೊಂಡರೆ ಎಸ್‌ಎಸ್‌ಎಲ್‌ಸಿ ಉತ್ತೀರ್ಣವಾಗುವುದು ಸುಲಭದ ಮಾರ್ಗವಾಗುತ್ತದೆ ಎಂದು ಕಿವಿ ಮಾತು ಹೇಳಿದರು.

ಪರೀಕ್ಷೆಯ ಭಯ ಬಿಟ್ಟು, ಆನಂದದಿAದ ಓದುವುದರಿಂದ ವಿಚಾರಗಳು ಮನದಲ್ಲಿ ಉಳಿದುಕೊಳ್ಳುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ವಿವೇಕಾನಂದರ ಪ್ರೇರಣೆಯೊಂದಿಗೆ ಓದುವ ಆತ್ಮವಿಶ್ವಾಸವನ್ನು ಮತ್ತು ಉತ್ತೀರ್ಣರಾಗುತ್ತೇವೆ ಎಂಬ ಗುರಿಯೊಂದಿಗೆ ಮುನ್ನಡೆದರೆ ಯಶಸ್ಸು ಸಾಧ್ಯ ಎಂದು ಸಲಹೆ ನೀಡಿದರು.

ಜಿಲ್ಲಾ ವಿಷಯ ಪರಿವೀಕ್ಷಕಿ ಬಿಂದು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಕಲಿಕೆಯ ಗುಣಗಳು ಮೈಗೂಡಿಕೊಂಡಿವೆ. ಅವುಗಳನ್ನು ಬಡಿದೆಚ್ಚರಿಸುವ ಪ್ರೇರಣೆಯಾಗಬೇಕು. ಆ ಉದ್ದೇಶಕ್ಕೆ ರಾಮಕೃಷ್ಣ ಶಾರದಾಶ್ರಮ ಪೂರಕ ವಾತಾವರಣ ಒದಗಿಸುತ್ತದೆ ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಇಲಾಖೆ ಆಯೋಜಿಸಿದೆ ಎಂದರು.

ವಿದ್ಯಾರ್ಥಿಗಳಿಗೆ ವಿಜ್ಞಾನ, ಗಣಿತ, ಹಿಂದಿ, ಇಂಗ್ಲಿಷ್, ಸಮಾಜ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಓದಿಗೆ ಪ್ರೇರಣೆಯನ್ನು ತುಂಬಲಾಯಿತು.

ತಾಲೂಕು ಸಮನ್ವಯ ಅಧಿಕಾರಿ ಕೆ.ಪಿ ಮಹೇಶ್, ತಾಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ, ಉತ್ತಪ್ಪ, ತಾಲೂಕು ಶಿಕ್ಷಣ ಸಂಯೋಜಕಿ ಕವಿತಾ, ಪೊನ್ನಂಪೇಟೆ ಕ್ಲಸ್ಟರ್ ಸಮೂಹ ಸಂಪನ್ಮೂಲಾಧಿಕಾರಿ ವಾಸು ವರ್ಮ ಸೇರಿದಂತೆ ತಾಲೂಕಿನ ವಿವಿಧ ಶಾಲೆಗಳ, ಶಿಕ್ಷಕರುಗಳು ವಿದ್ಯಾರ್ಥಿಗಳು ಹಾಜರಿದ್ದರು.