ಹೆಚ್.ಜೆ. ರಾಕೇಶ್
ಮಡಿಕೇರಿ, ಫೆ. ೧೩: ಭತ್ತ ಬೆಳೆಯುವ ರೈತರಿಗೆ ಬೆಂಬಲ ಬೆಲೆ ನೀಡುವ ಉದ್ದೇಶದಿಂದ ಸರಕಾರ ಸ್ಥಾಪಿಸಿದ ಭತ್ತ ಖರೀದಿ ಕೇಂದ್ರ ಜಿಲ್ಲೆಯ ರೈತರಿಗೆ ಬೇಡವಾಗಿದೆ ಎಂಬ ಸ್ಥಿತಿ ಸದ್ಯ ಸೃಷ್ಟಿಯಾಗಿದೆ. ಇದುವರೆಗೂ ಕೇವಲ ೩ ರೈತರು ಮಾತ್ರ ನೋಂದಣಿ ಮಾಡಿಕೊಂಡಿದ್ದು, ಯಾರೊಬ್ಬರು ಖರೀದಿ ಕೇಂದ್ರಕ್ಕೆ ಇದುವರೆಗೂ ಫಸಲು ಮಾರಾಟ ಮಾಡದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಬೇರೆ ಜಿಲ್ಲೆಗಳಲ್ಲಿ ಭತ್ತ ಖರೀದಿ ಆರಂಭಿಸುವAತೆ ಹೋರಾಟಗಳು ನಡೆದಿದ್ದವು. ಆದರೆ, ಜಿಲ್ಲೆಯಲ್ಲಿ ಖರೀದಿ ಕೇಂದ್ರವಿದ್ದರೂ ಇಲ್ಲದಂತಹ ಪರಿಸ್ಥಿತಿ ತಲೆದೋರಿದೆ. ಒಂದು ಕಾಲದಲ್ಲಿ ಭತ್ತದ ಕಣಜ ಎಂದೇ ಕರೆಸಿಕೊಳ್ಳುತ್ತಿದ್ದ ಕೊಡಗಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಭತ್ತ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆನೆ ಸೇರಿದಂತೆ ವನ್ಯಜೀವಿ ದಾಳಿ, ಪ್ರತಿಕೂಲ ಹವಾಮಾನ, ಕಡಿಮೆ ಲಾಭ ಹೀಗೆ ನಾನಾ ಕಾರಣಗಳಿಂದ ಭತ್ತದ ಕೃಷಿ ಮೇಲಿನ ಒಲವು ಕುಸಿಯುತ್ತಿದೆ. ಬೆಳೆದ ರೈತರಿಗೆ ಬೆಂಬಲ ಬೆಲೆ ನೀಡುವುದರೊಂದಿಗೆ ಭತ್ತ ಬೆಳೆಯಲು ಪ್ರೋತ್ಸಾಹ ನೀಡಬೇಕೆಂಬ ಉದ್ದೇಶದಿಂದ ಆರಂಭಗೊAಡ ಯೋಜನೆ ಕೊಡಗಿನಲ್ಲಿ ಫಲಪ್ರದವಾದಂತೆ ಕಾಣುತ್ತಿಲ್ಲ. ಮಾರುಕಟ್ಟೆಕ್ಕಿಂತ ಕಡಿಮೆ ಬೆಲೆ ಸಿಗುತ್ತಿರುವುದರಿಂದ ರೈತರು ಭತ್ತ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ವೀರಾಜಪೇಟೆಯ ಕೃಷಿ ಇಲಾಖೆ ಆವರಣ ಸೇರಿದಂತೆ ಸೋಮವಾರಪೇಟೆ, ಗೋಣಿಕೊಪ್ಪ, ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕುಶಾಲನಗರ ಹಾಗೂ ಮಡಿಕೇರಿಯ ಆರ್‌ಎಂಸಿಗಳಲ್ಲಿ ಈಗಾಗಲೇ ಭತ್ತ ಖರೀದಿ ಕೇಂದ್ರ ಆರಂಭವಾಗಿದೆ. ಅಕ್ಟೋಬರ್ ೧೫ ರಿಂದ ಡಿ. ೩೧ರ ತನಕ ಮಾರಾಟಕ್ಕೆ ನೋಂದಣಿ ಮಾಡಿಕೊಳ್ಳಲು ಅವಕಾಶವಿತ್ತು. ಈ ಅವಧಿಯಲ್ಲಿ ಕೇವಲ ಮೂರು ಮಂದಿ ರೈತರು ಒಟ್ಟು ೧೫೦ ಕ್ವಿಂಟಾಲ್ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದು, ಇದುವರೆಗೂ ಫಸಲನ್ನು ಕೇಂದ್ರಕ್ಕೆ ತಂದು ಮಾರಾಟ ಮಾಡಿಲ್ಲ. ಫೆ. ೨೮ರ ತನಕ ಮಾರಾಟಕ್ಕೆ ಅವಕಾಶವಿದೆ. ಕ್ವಿಂಟಾಲ್‌ಗೆ ರೂ. ೨೩೬೯ ಬೆಲೆ ಸರಕಾರದಿಂದ ನಿಗದಿಯಾಗಿದ್ದು, ಈ ಮೌಲ್ಯದಲ್ಲಿಯೇ ಖರೀದಿ ನಡೆಯುತ್ತಿದೆ. ವ್ಯಾಪಾರಿಗಳು ೨೪೦೦ ರಿಂದ ೨೫೦೦ ರೂಪಾಯಿ ಹಣ ನೀಡಿ ಭತ್ತ ಖರೀದಿಸುತ್ತಿರುವುದರಿಂದ ಸರಕಾರ ಸ್ಥಾಪಿಸಿದ ಕೇಂದ್ರಕ್ಕೆ ಫಸಲು ಮಾರಾಟ ಮಾಡಲು ರೈತರು ಉತ್ಸಾಹ ತೋರುತ್ತಿಲ್ಲ. ಅದಲ್ಲದೆ ಮಾರಾಟದ ನಂತರ ಕೆಲದಿನಗಳು ಹಣಕ್ಕಾಗಿ ಕಾಯಬೇಕಾಗಿದೆ. ಅಲ್ಲದೆ ಬೆಳೆಯನ್ನು ಕೇಂದ್ರಕ್ಕೆ ರೈತರೇ ಸಾಗಿಸಬೇಕಾಗಿದೆ. ಅದುವೆ ವ್ಯಾಪಾರಿಗಳಿಗೆ ಮಾರಾಟ ಮಾಡಿದರೆ ತಾವೇ ತೆರಳಿ ಫಸಲು ಸಂಗ್ರಹಿಸುವುದು ಕೂಡ ಸರಕಾರದ ಕೇಂದ್ರಗಳಿಗೆ ಮಾರಾಟ ಮಾಡಲು ಹಿಂಜರಿಯಲು ಕಾರಣವಾಗಿದೆ.
ಉತ್ಸಾಹ ಕಳೆದುಕೊಂಡ ರೈತರು
ಈ ಮೊದಲು ಭತ್ತ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಲು ರೈತರು ಸ್ವಲ್ಪ ಮಟ್ಟಿಗೆ ಉತ್ಸಾಹ ತೋರುತ್ತಿದ್ದರು. ಜಿಲ್ಲೆಯ ೮ ಕಡೆಗಳಲ್ಲಿ ಕೇಂದ್ರಗಳಿದ್ದವು. ಆದರೆ, ಇದೀಗ ಅದರ ಸಂಖ್ಯೆ ೫ಕ್ಕೆ ಇಳಿದಿದೆ. ೨೦೨೦ರಲ್ಲಿ ೫೮೩ ರೈತರು ಫಸಲು ಮಾರಾಟ ಮಾಡಿದ್ದರು. ೨೦೨೧ರಲ್ಲಿ ೫೯೭ ರೈತರು ಸೇರಿ ಒಟ್ಟು ೨೪,೯೨೬ ಕ್ವಿಂಟಾಲ್‌ನಷ್ಟು ಭತ್ತ ಸಂಗ್ರಹವಾಗಿತ್ತು. ವರ್ಷ ಕಳೆಯುತ್ತಿದಂತೆ ರೈತರ ಸಂಖ್ಯೆ ಕುಸಿಯಲಾರಂಭಿಸಿದ್ದು, ಕಳೆದ ವರ್ಷ ೨೮೦ ಕ್ವಿಂಟಾಲ್‌ನಷ್ಟು ಮಾತ್ರ ವ್ಯಾಪಾರ ನಡೆದಿತ್ತು. ಆದರೆ, ಈ ವರ್ಷ ಸದ್ಯಕ್ಕೆ ಶೂನ್ಯ ಸಂಪಾದನೆ ಸಾಧಿಸಿದಂತಾಗಿದೆ.